ಪಾಕಿಸ್ತಾನದಲ್ಲಿ ಸರ್ಕಾರ ರಚಿಸಲು ಮುಂದಾದ ಶೆಹಬಾಝ್ ಶರೀಫ್, ಬಿಲಾವಲ್ ಭುಟ್ಟೋ; ವರದಿ
ಇಸ್ಲಾಮಾಬಾದ್: ಪಾಕಿಸ್ತಾನದ ಮುಸ್ಲಿಂ ಲೀಗ್-ನವಾಝ್ (ಪಿಎಂಎಲ್-ಎನ್) ಹಾಗೂ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಕೇಂದ್ರ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಮೈತ್ರಿ ಸರ್ಕಾರ ರಚಿಸಲು ಒಪ್ಪಿವೆ. ಶೆಹಬಾಝ್ ಶರೀಫ್ ಆವರು ಬಿಲಾವಲ್ ಭುಟ್ಟೋ ಹಾಗೂ ಮಾಜಿ ಪ್ರಧಾನಿ ಆಸಿಫ್ ಅಲಿ ಝರ್ದಾರಿ ಅವರನ್ನು ಭೇಟಿಯಾಗಿ ಪಾಕಿಸ್ತಾನಕ್ಕಾಗಿ ಜೊತೆಯಾಗಿ ಕೆಲಸ ಮಾಡಲು ಅವರನ್ನು ಆಹ್ವಾನಿಸಿದ್ದಾರೆ.
ಗುರುವಾರ ನಡೆದ ಚುನಾವಣೆಯಲ್ಲಿ ಯಾರೂ ಸ್ಪಷ್ಟ ವಿಜಯ ಗಳಿಸಿಲ್ಲ ಹಾಗೂ ನಿಧಾನಗತಿಯ ಮತ ಎಣಿಕೆ ಶನಿವಾರ ಮುಕ್ತಾಯಗೊಳ್ಳುತ್ತಿದೆ.
ಮಾಜಿ ಪ್ರಧಾನಿ ಹಾಗೂ ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಶರೀಫ್ ಅವರ ಸೋದರ ಶೆಹಬಾಜ್ ಶರೀಫ್ ಅವರು ಪ್ರಮುಖ ಪಿಪಿಪಿ ನಾಯಕರನ್ನು ಪಂಜಾಬ್‌ನ ಹಂಗಾಮಿ ಸಿಎಂ ಮೊಹ್ಸಿನ್ ನಖ್ವಿ ಅವರ ನಿವಾಸದಲ್ಲಿ ಭೆಟಿಯಾದರು. ಈ ಸಂದರ್ಭ ಬಿಲಾವಲ್ ಭುಟ್ಟೋ ಮತ್ತು ಅವರ ತಂದೆ ಆಸಿಫ್ ಅಲಿ ಝರ್ದಾರಿಗೆ ಪಿಎಂಎಲ್-ಎನ್ ಜೊತೆ ಸಹಯೋಗ ನಡೆಸುವಂತೆ ಶರೀಫ್ ಕೇಳಿಕೊಂಡರು.
ಎರಡೂ ಪಕ್ಷಗಳು ಸರ್ಕಾರ ನಡೆಸಲು ಒಪ್ಪಿಗೆ ನೀಡಿದ್ದು ಮುಂದಿನ ಸಭೆಯಲ್ಲಿ ಅಧಿಕಾರ ಹಂಚಿಕೆ ಸೂತ್ರ ಕುರಿತಂತೆ ತಮ್ಮ ಅಭಿಪ್ರಾಯ ಮಂಡಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.
ಸೇನೆಯ ಬೆಂಬಲ ಹೊಂದಿರುವ ಪಿಎಂಎಲ್ಎನ್ ಒಟ್ಟು 71 ಸ್ಥಾನಗಳನ್ನು, ಪಿಪಿಪಿ 53 ಸ್ಥಾನಗಳನ್ನು ಗಳಿಸಿದರೆ ಉಳಿದ ಸ್ಥಾನಗಳು ಸಣ್ಣ ಪಕ್ಷಗಳ ಪಾಲಾಗಿವೆ. ಒಟ್ಟು 266 ಸ್ಥಾನಗಳ ನ್ಯಾಷನಲ್ ಅಸೆಂಬ್ಲಿಯ 15 ಕ್ಷೇತ್ರಗಳ ಫಲಿತಾಂಶ ಇನ್ನಷ್ಟೇ ಹೊರಬೀಳಬೇಕಿದೆ.
ನವಾಜ್ ಶರೀಫ್ ಅವರ ಪಕ್ಷ ತನಗೆ ವಿಜಯ ದೊರಕಿದೆ ಎಂದು ಹೇಳಿಕೊಂಡಿದ್ದರೆ ಅತ್ತ ಜೈಲಿನಲ್ಲಿರುವ ಪಾಕಿಸ್ತಾನ್ ತೆಹರೀಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪಕ್ಷ ತನಗೆ ಜಯ ದೊರಕಿದೆ ಎಂದು ಹೇಳಿಕೊಂಡಿದೆ.