ಹಂಗಾಮಿ ಸರಕಾರವು ಚುನಾವಣೆ ನಡೆಸಲು ನಿರ್ಧರಿಸಿದ ಬಳಿಕ ಸ್ವದೇಶಕ್ಕೆ ಮರಳಲಿರುವ ಶೇಕ್ ಹಸೀನಾ: ಪುತ್ರ ಸಾಜೀದ್

Update: 2024-08-09 06:49 GMT

ಶೇಕ್ ಹಸೀನಾ (Photo: PTI) 

ಹೊಸದಿಲ್ಲಿ: ಹಂಗಾಮಿ ಸರಕಾರವು ಚುನಾವಣೆ ನಡೆಸಲು ನಿರ್ಧರಿಸಿದ ನಂತರ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಸ್ವದೇಶಕ್ಕೆ ಮರಳಲಿದ್ದಾರೆ ಎಂದು ಅವರ ಪುತ್ರ ಸಜೀಬ್ ವಾಝೆದ್ ಜಾಯ್ ಹೇಳಿದ್ದಾರೆ.

ಪದತ್ಯಾಗ ಮಾಡಬೇಕೆಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಹಿಂಸಾತ್ಮಕ ಮಾರ್ಗ ಹಿಡಿದಿದ್ದರಿಂದ, ಸೋಮವಾರ ಶೇಕ್ ಹಸೀನಾ ಭಾರತಕ್ಕೆ ಪರಾರಿಯಾಗಿದ್ದರು. ಇದಾದ ನಂತರ, ಗುರುವಾರ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಹಂಗಾಮಿ ಸರಕಾರವನ್ನು ರಚಿಸಲಾಗಿದ್ದು, ಚುನಾವಣೆ ನಡೆಸುವ ಜವಾಬ್ದಾರಿ ಈ ಸರಕಾರದ ಮೇಲಿದೆ.

“ಕೆಲ ಕಾಲ ಅವರು (ಹಸೀನಾ) ಭಾರತದಲ್ಲಿ ಇರಲಿದ್ದಾರೆ. ಬಾಂಗ್ಲಾದೇಶದಲ್ಲಿ ಚುನಾವಣೆ ನಡೆಸಲು ಹಂಗಾಮಿ ಸರಕಾರವು ನಿರ್ಧರಿಸಿದ ನಂತರ, ಅವರು ಸ್ವದೇಶಕ್ಕೆ ಮರಳಿದ್ದಾರೆ” ಎಂದು ಅಮೆರಿಕ ಮೂಲದ ಅವರ ಪುತ್ರ ಸಜೀಬ್ ವಾಝೆದ್ ಜಾಯ್ ಹೇಳಿದ್ದಾರೆ ಎಂದು Times of India ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸುದೀರ್ಘ ಕಾಲ ಪ್ರಧಾನಿಯಾಗಿದ್ದ ಶೇಕ್ ಹಸೀನಾರ ವಿರುದ್ಧ ದೇಶವ್ಯಾಪಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಸುಮಾರು 300 ಮಂದಿ ಸಾವಿಗೀಡಾಗಿದ್ದಾರೆ. ಇದಾದ ನಂತರ ರಚನೆಯಾಗಿರುವ ಹಂಗಾಮಿ ಸರಕಾರದಲ್ಲಿ ಶೇಕ್ ಹಸೀನಾರ ಅವಾಮಿ ಲೀಗ್ ಗೆ ಅವಕಾಶ ನೀಡಲಾಗಿಲ್ಲ.

ಹೊಸ ದಿಲ್ಲಿಯ ಸುರಕ್ಷಿತ ನಿವಾಸವೊಂದರಲ್ಲಿ ಹಸೀನಾರಿಗೆ ಆಶ್ರಯ ಒದಗಿಸಲಾಗಿದೆ. ಅವರು ಬ್ರಿಟನ್ ನಲ್ಲಿ ಆಶ್ರಯ ಪಡೆಯಲು ಬಯಸಿದ್ದಾರಾದರೂ, ಈ ಕುರಿತು ಪ್ರತಿಕ್ರಿಯಿಸಲು ಬ್ರಿಟಿಷ್ ಗೃಹ ಕಚೇರಿಯು ನಿರಾಕರಿಸಿದೆ ಎಂದು ಭಾರತೀಯ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News