ಚಿಕಾಗೊದ ಮೂರು ಕಡೆ ಗುಂಡಿನ ದಾಳಿ: ಎಂಟು ಮಂದಿ ಮೃತ್ಯು
ಚಿಕಾಗೊ: ಅಮೆರಿಕದ ಚಿಕಾಗೊ ಉಪನಗರದ ಮೂರು ಕಡೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಎಂಟು ಮಂದಿಯನ್ನು ಹತ್ಯೆ ಮಾಡಿದ್ದಾನೆ. ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂದು ಇಲಿನೊಯಿಸ್ ಅಧಿಕಾರಿಗಳು ಹೇಳಿದ್ದಾರೆ.
ಈ ದಾಳಿಯ ಉದ್ದೇಶದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜೊಲಿಯೆಟ್ ಮತ್ತು ವಿಲ್ ಕೌಂಟಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ದಾಳಿಕೋರನಿಗೆ ಎಲ್ಲ ಸಂತ್ರಸ್ತರ ಪರಿಚಯ ಇತ್ತು ಎಂದೂ ಅಧಿಕಾರಿಗಳು ವಿವರಿಸಿದ್ದಾರೆ.
ಭಾನುವಾರ ಹಾಗೂ ಸೋಮವಾರ ಮೂರು ಪ್ರತ್ಯೇಕ ಕಡೆಗಳಲ್ಲಿ ಮೃತದೇಹಗಳು ಪತ್ತೆಯಾಗಿವೆ ಎಂದು ಸೋಮವಾರ ಸಂಜೆ ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಹಲವು ಗಂಟೆಗಳ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸಶಸ್ತ್ರ ಹಾಗೂ ಅಪಾಯಕಾರಿ ವ್ಯಕ್ತಿಯ ಬಗ್ಗೆ ಎಚ್ಚರವಿರಲಿ ಎಂಬ ಸಂದೇಶವನ್ನು ಹರಿ ಬಿಡಲಾಗಿತ್ತು.
ಒಬ್ಬ ವ್ಯಕ್ತಿಯ ಮೃತದೇಹ ಭಾನುವಾರ ವಿಲ್ ಕೌಂಟಿಯಲ್ಲಿನ ಆತನ ಮನೆಯಲ್ಲಿ ಕಂಡುಬಂದಿತ್ತು. ಇತರ ಏಳು ಮಂದಿಯ ದೇಹಗಳು ಸೋಮವಾರ ಜೊಯಿಲೆಟ್ ನ ಎರಡು ಮನೆಗಳಲ್ಲಿ ಕಂಡುಬಂದಿವೆ ಎಂದು ಹೇಳಲಾಗಿದೆ.