ಫೆಲೆಸ್ತೀನ್ ನಲ್ಲಿ ಇಸ್ರೇಲ್ ನಿಂದ ಜನಾಂಗೀಯ ಹತ್ಯೆ ನಡೆಯುತ್ತಿದೆ ಎಂದು ನ್ಯಾಯಾಲಯದ ಮೆಟ್ಟಿಲೇರಿದ ದಕ್ಷಿಣ ಆಫ್ರಿಕಾ

Update: 2024-01-12 17:05 GMT

Photo: NDTV

ಹೇಗ್: ಗಾಝಾ ಸಂಘರ್ಷದ ಸಂದರ್ಭದಲ್ಲಿ ಇಸ್ರೇಲ್ ದೇಶವು ಫೆಲೆಸ್ತೀನ್ ವಿರುದ್ಧ ಜನಾಂಗೀಯ ಹತ್ಯೆ ನಡೆಸಿದೆ ಎಂದು ಆರೋಪಿಸಿ ದಕ್ಷಿಣ ಆಫ್ರಿಕಾವು ಹೇಗ್ ನಲ್ಲಿರುವ ಅಂತರರಾಷ್ಟ್ರೀಯ ನ್ಯಾಯಾಲಯ(ಅಥವಾ ವಿಶ್ವ ನ್ಯಾಯಾಲಯ)ದ ಮೆಟ್ಟಿಲೇರಿದೆ. ಫೆಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಸಂಘರ್ಷ ನಡೆಯುತ್ತಿರುವಾಗಲೇ ಜನಾಂಗೀಯ ಹತ್ಯೆಯ ಆರೋಪ ಹೊರಿಸಿರುವುದು ಅಸಾಧಾರಣವಾಗಿದೆ ಎಂದು thewire.in ವರದಿ ಮಾಡಿದೆ.

ಅದೇ ರೀತಿ, ಇಸ್ರೇಲ್ ವಿರುದ್ಧ ದಕ್ಷಿಣ ಆಫ್ರಿಕಾ ಮಾಡಿರುವ ಆರೋಪದಲ್ಲಿ ಅಗಾಧವಾದ ಸಾಂಸ್ಕೃತಿಕ, ರಾಜತಾಂತ್ರಿಕ, ಚಾರಿತ್ರಿಕ ಹಾಗೂ ರಾಜಕೀಯ ಮಹತ್ವ ಅಡಗಿದೆ. ಆದರೆ, ದಕ್ಷಿಣ ಆಫ್ರಿಕಾದ ಆರೋಪವನ್ನು ಅಲ್ಲಗಳೆದಿರುವ ಇಸ್ರೇಲ್, ತಾನು ಈ ಪ್ರಕರಣದ ವಿರುದ್ಧ ಹೋರಾಡುವುದಾಗಿ ಶಪಥಗೈದಿದೆ.

ಅಂತಿಮ ತೀರ್ಪು ಹೊರ ಬೀಳುವುದಕ್ಕೂ ಮುನ್ನ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿನ ಪ್ರಕರಣಗಳು ಹಲವಾರು ವರ್ಷಗಳನ್ನು ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಹೀಗಾಗಿಯೇ ದಕ್ಷಿಣ ಆಫ್ರಿಕಾವು ಅಂತರರಾಷ್ಟ್ರೀಯ ತಡೆಯಾಜ್ಞೆಯಂಥ ತಾತ್ಕಾಲಿಕ ಕ್ರಮಗಳಿಗಾಗಿ ಮನವಿ ಮಾಡಿದೆ. ಈ ಪ್ರಕರಣದ ಪ್ರಾಥಮಿಕ ವಿಚಾರಣೆಯು ಇದೇ ಜನವರಿ 11 ಮತ್ತು 12ರಂದು ಹೇಗ್ ನಲ್ಲಿ ನಡೆದಿದೆ.

ದಕ್ಷಿಣ ಆಫ್ರಿಕಾದ ತಾತ್ಕಾಲಿಕ ಕ್ರಮಕ್ಕಾಗಿನ ಮನವಿ ಕುರಿತು ಜನವರಿ ಅಂತ್ಯದ ವೇಳೆಗೆ ನಿರ್ಣಯವೊಂದು ಹೊರಬೀಳುವ ಸಾಧ್ಯತೆ ಇದ್ದು, ಇದು ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯ ಮೇಲೆ ಭಾರಿ ಪರಿಣಾಮವನ್ನುಂಟು ಮಾಡುವ ಸಾಧ್ಯತೆ ಇದೆ.

ದಕ್ಷಿಣ ಆಫ್ರಿಕಾದ ತಾತ್ಕಾಲಿಕ ಕ್ರಮಕ್ಕಾಗಿನ ಮನವಿಯಿಂದ ಎರಡು ಸಂಭಾವ್ಯ ಸಾಧ್ಯತೆಗಳಿವೆ.

ತಾತ್ಕಾಲಿಕ ಕ್ರಮಗಳನ್ನು ಆದೇಶಿಸಲು ನ್ಯಾಯಾಲಯವು ನಿರಾಕರಿಸಬಹುದು. ಉದಾಹರಣೆಗೆ, ಪ್ರಕರಣವು ತನ್ನ ವ್ಯಾಪ್ತಿ ಮೀರಿದೆ ಹಾಗೂ ತಾಂತ್ರಿಕ ಕಾನೂನಾತ್ಮಕ ನೆಲೆಯಲ್ಲಿ ದಕ್ಷಿಣ ಆಫ್ರಿಕಾದ ಪ್ರಕರಣವನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎನ್ನಬಹುದು ಅಥವಾ ದಕ್ಷಿಣ ಆಫ್ರಿಕಾವು ತನ್ನ ಆರೋಪಗಳಿಗೆ ಪೂರಕ ಸಾಕ್ಷ್ಯಗಳನ್ನು ಒದಗಿಸಿಲ್ಲ ಎಂದು ಹೇಳಬಹುದು.

ಅಥವಾ, ದಕ್ಷಿಣ ಆಫ್ರಿಕಾದ ಮನವಿಯನ್ನು ನ್ಯಾಯಾಲಯವು ಎತ್ತಿ ಹಿಡಿಯಬಹುದು ಹಾಗೂ ತಾತ್ಕಾಲಿಕ ಕ್ರಮಗಳನ್ನು ಆದೇಶಿಸಬಹುದು. ಗಾಝಾದಲ್ಲಿನ ಇಸ್ರೇಲ್ ಸೇನಾ ಕಾರ್ಯಾಚರಣೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಿದ್ದರೆ ಮಾತ್ರ ಇಸ್ರೇಲ್ ವಿರುದ್ಧ ತಾತ್ಕಾಲಿಕ ಕ್ರಮಗಳನ್ನು ಆದೇಶಿಸಬಹುದಾಗಿದೆ.

ಆದರೆ, ನ್ಯಾಯಾಲಯವು ತನ್ನ ನಿರ್ಣಯಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ, ಉಕ್ರೇನ್ ಮೇಲಿನ ರಷ್ಯಾ ದಾಳಿಯ ವಿರುದ್ಧ 2022ರಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದ ತಾತ್ಕಾಲಿಕ ಕ್ರಮಗಳ ಆದೇಶವನ್ನು ರಷ್ಯಾ ಉಪೇಕ್ಷಿಸಿತ್ತು.

ನ್ಯಾಯಾಲಯದ ಆದೇಶವೇನೇ ಆಗಿದ್ದರೂ, ಹಮಾಸ್ ವಿರುದ್ದ ತನ್ನ ಸ್ವಯಂರಕ್ಷಣೆಯ ಹಕ್ಕನ್ನು ಇಸ್ರೇಲ್ ಉಳಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News