ಉತ್ತರ ಕೊರಿಯಾ ಯೋಧರತ್ತ ಎಚ್ಚರಿಕೆಯ ಗುಂಡು ಹಾರಿಸಿದ ದಕ್ಷಿಣ ಕೊರಿಯಾ
ಸಿಯೋಲ್: ಗಡಿದಾಟಿ ಬಂದ ಉತ್ತರ ಕೊರಿಯಾ ಯೋಧರತ್ತ ಎಚ್ಚರಿಕೆಯ ಗುಂಡು ಹಾರಿಸಿರುವುದಾಗಿ ದಕ್ಷಿಣ ಕೊರಿಯಾದ ರಕ್ಷಣಾ ಇಲಾಖೆ ಮಂಗಳವಾರ ಹೇಳಿದೆ. ಇದು ಈ ತಿಂಗಳಲ್ಲಿ ನಡೆದಿರುವ ಎರಡನೆಯ ಪ್ರಕರಣವಾಗಿದೆ.
ಉತ್ತರ ಕೊರಿಯಾವು ಗಡಿಯ ಬಳಿ ಉಭಯ ದೇಶಗಳನ್ನು ಪ್ರತ್ಯೇಕಿಸುವ `ಸೇನಾರಹಿತ ವಲಯ'ದ ಒಳಗೆ ರಸ್ತೆಗಳು ಹಾಗೂ ಗೋಡೆಯನ್ನು ಕಟ್ಟುತ್ತಿದೆ .ಮಿಲಿಟರಿ ಗಡಿರೇಖೆಯ(ಎಂಡಿಎಲ್) ಉತ್ತರದಲ್ಲಿ ಈ ನಿರ್ಮಾಣ ಚಟುವಟಿಕೆ ನಡೆಯುತ್ತಿದೆ. ಇಲ್ಲಿ ನೆಲವನ್ನು ಅಗೆದು ಗೋಡೆ ಕಟ್ಟಲಾಗುತ್ತಿದೆ ಮತ್ತು ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಟ್ಯಾಂಕ್ ವಿರೋಧಿ ಬ್ಯಾರಿಯರ್ ಗಳ ನಿರ್ಮಾಣ, ನೆಲಬಾಂಬ್‍ಗಳನ್ನು ಇರಿಸುವ ಕೆಲಸ ನಡೆಯುತ್ತಿದೆ. ನೆಲಬಾಂಬ್ ಇರಿಸುವ ಸಂದರ್ಭ ಸ್ಫೋಟಗೊಂಡು ಉತ್ತರ ಕೊರಿಯಾದ ಹಲವು ಯೋಧರು ಮೃತಪಟ್ಟಿದ್ದಾರೆ . ಎಪ್ರಿಲ್‍ನಿಂದ ಆರಂಭಗೊಂಡಿರುವ ನಿರ್ಮಾಣ ಕಾರ್ಯ ಮುಂದುವರಿದಿದ್ದು ದಕ್ಷಿಣ ಕೊರಿಯಾಕ್ಕೆ ನಿಷ್ಟೆ ಬದಲಿಸುವವರನ್ನು ತಡೆಯುವ ಕ್ರಮ ಇದಾಗಿರಬಹುದು ಎಂದು ದಕ್ಷಿಣ ಕೊರಿಯಾ ಸಶಸ್ತ್ರ ಪಡೆಗಳ ಮುಖ್ಯಸ್ಥರು ಹೇಳಿದ್ದಾರೆ.
ನಿರ್ಮಾಣ ಚಟುವಟಿಕೆಯ ಸಂದರ್ಭ ಸುಮಾರು 30 ಯೋಧರು ಗಡಿ ದಾಟಿ ನಮ್ಮ ಪ್ರದೇಶಕ್ಕೆ ಬಂದಿದ್ದರು. ನಮ್ಮ ಪಡೆಗಳು ಎಚ್ಚರಿಕೆಯ ಗುಂಡು ಹಾರಿಸಿದೊಡನೆ ಹಿಂತಿರುಗಿದ್ದಾರೆ. ಗಡಿಯಾದ್ಯಂತ ಉತ್ತರ ಕೊರಿಯಾ ಯೋಧರ ಚಲನವಲನದ ಬಗ್ಗೆ ಗರಿಷ್ಠ ನಿಗಾ ಇರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.