ದಕ್ಷಿಣ ಕೊರಿಯಾ: ಆಂತರಿಕ ಸಚಿವ ರಾಜೀನಾಮೆ

Update: 2024-12-08 15:37 GMT

ಲೀ ಸಾಂಗ್ ಮಿನ್ | PC : NDTV

ಸಿಯೋಲ್: ದೇಶವನ್ನು ಪ್ರಕ್ಷುಬ್ಧತೆಗೆ ತಳ್ಳಿದ ಮಿಲಿಟರಿ ಕಾನೂನು ಜಾರಿಯ ಘೋಷಣೆಯ ಹೊಣೆ ಹೊತ್ತು ದಕ್ಷಿಣ ಕೊರಿಯಾದ ಆಂತರಿಕ ಸಚಿವ ಲೀ ಸಾಂಗ್ ಮಿನ್ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ.

ಸಾರ್ವಜನಿಕರಿಗೆ ಮತ್ತು ಅಧ್ಯಕ್ಷರಿಗೆ ಉತ್ತಮವಾಗಿ ಸೇವೆ ಸಲ್ಲಿಸಲು ವಿಫಲವಾದ ಜವಾಬ್ದಾರಿಯನ್ನು ಹೊತ್ತು ಹುದ್ದೆಗೆ ರಾಜೀನಾಮೆ ಸಲ್ಲಿಸಿರುವುದಾಗಿ ಲೀ ಸಾಂಗ್ ಹೇಳಿದ್ದಾರೆ. ಅಧ್ಯಕ್ಷ ಯೂನ್ ಸುಕ್ ಯೆಯೋಲ್ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ವರದಿಯಾಗಿದೆ.

ಈ ಮಧ್ಯೆ, ಶನಿವಾರ ಸಂಸತ್‍ನಲ್ಲಿ ಮಂಡಿಸಿದ್ದ ದೋಷಾರೋಪಣೆ ನಿರ್ಣಯದಿಂದ ಸ್ವಲ್ಪದರಲ್ಲಿ ಪಾರಾದ ಅಧ್ಯಕ್ಷ ಯೂನ್ ಸುಕ್ ವಿರುದ್ಧ ಡಿಸೆಂಬರ್ 14ರಂದು ಮತ್ತೊಮ್ಮೆ ದೋಷಾರೋಪಣೆ ನಿರ್ಣಯ ಮಂಡಿಸುವುದಾಗಿ ಪ್ರಮುಖ ವಿರೋಧ ಪಕ್ಷ ಡೆಮಾಕ್ರಟಿಕ್ ಪಾರ್ಟಿ(ಡಿಪಿ) ಘೋಷಿಸಿದೆ.

ಪ್ರಕ್ಷುಬ್ಧತೆ ಮತ್ತು ಮಿಲಿಟರಿ ದಂಗೆಗೆ ಪ್ರೋತ್ಸಾಹ ನೀಡಿ ದಕ್ಷಿಣ ಕೊರಿಯಾದ ಸಾಂವಿಧಾನಿಕ ವ್ಯವಸ್ಥೆಯನ್ನು ನಾಶಗೊಳಿಸಿದ ಘಟನೆಯ ಹಿಂದಿರುವ ಪ್ರಮುಖ ಅಪರಾಧಿ ಯೂನ್ ತಕ್ಷಣ ರಾಜೀನಾಮೆ ನೀಡದಿದ್ದರೆ ಅವರನ್ನು ದೋಷಾರೋಪಣೆಗೆ ಗುರಿಪಡಿಸದೆ ಬಿಡುವುದಿಲ್ಲ. ಡಿಸೆಂಬರ್ 14ರಂದು ಜನತೆಯ ಹೆಸರಲ್ಲಿ ಯೂನ್‍ರನ್ನು ದೋಷಾರೋಪಣೆಗೆ ಗುರಿಪಡಿಸಲಾಗುತ್ತದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News