ದಕ್ಷಿಣ ಕೊರಿಯಾ | ಮುಷ್ಕರ ನಿರತ ವೈದ್ಯರ ಲೈಸೆನ್ಸ್ ಅಮಾನತಿಗೆ ಕ್ರಮ
ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ಮುಷ್ಕರ ನಿರತ 4,900 ವೈದ್ಯರ ಲೈಸೆನ್ಸ್ ಗಳನ್ನು ಅಮಾನತುಗೊಳಿಸುವ ಕಾರ್ಯ ವಿಧಾನಗಳನ್ನು ಆರಂಭಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.
ವೈದ್ಯಕೀಯ ತರಬೇತಿ ಯೋಜನೆಯಲ್ಲಿ ಸುಧಾರಣೆ ತರುವ ಸರಕಾರದ ನಿರ್ಧಾರವನ್ನು ವಿರೋಧಿಸಿ 4,900 ಜೂನಿಯರ್ ವೈದ್ಯರು ರಾಜೀನಾಮೆ ನೀಡಿ ಪ್ರತಿಭಟನೆ ನಡೆಸಿದ್ದಾರೆ. ಇದು ದೇಶದ ವೈದ್ಯಕೀಯ ಕ್ಷೇತ್ರದ ಕಾರ್ಯನಿರ್ವಹಣೆಗೆ ತೊಡಕಾಗಿದೆ.
ದೇಶದಲ್ಲಿರುವ ವೈದ್ಯರ ಕೊರತೆಯನ್ನು ನೀಗಿಸಲು ವೈದ್ಯರ ತರಬೇತಿ ಯೋಜನೆಯನ್ನು ಹೆಚ್ಚಿಸಲು ಸರಕಾರ ನಿರ್ಧರಿಸಿದೆ. ಇದರಿಂದ ವೈದ್ಯಕೀಯ ಸೇವೆಯ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ ಎಂದು ಜೂನಿಯರ್ ವೈದ್ಯರು ವಿರೋಧಿಸುತ್ತಿದ್ದಾರೆ.
ತಕ್ಷಣ ಸೇವೆಗೆ ಮರಳದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಎಚ್ಚರಿಕೆ ನೀಡಿದ್ದರೂ ಸುಮಾರು 12,000 ಜೂನಿಯರ್ ವೈದ್ಯರು ಕೆಲಸಕ್ಕೆ ಹಾಜರಾಗಿಲ್ಲ. ಆದ್ದರಿಂದ ಸೇನೆಯ ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಬಳಸಲು ಸರಕಾರ ನಿರ್ಧರಿಸಿದೆ. `ಮಾರ್ಚ್ 8ರವರೆಗೆ 49,000ಕ್ಕೂ ಅಧಿಕ ತರಬೇತಿ ವೈದ್ಯರಿಗೆ(ಟ್ರೈನೀ ಡಾಕ್ಟರ್ಸ್) ಆಡಳಿತಾತ್ಮಕ ಅಧಿಸೂಚನೆಯನ್ನು ರವಾನಿಸಲಾಗಿದೆ. ಪ್ರಥಮ ಹಂತದಲ್ಲಿ ಮುಷ್ಕರ ನಿರತ ವೈದ್ಯರ ಲೈಸೆನ್ಸ್ ಗಳನ್ನು ಅಮಾನತುಗೊಳಿಸಲಾಗುವುದು ಎಂದು ಆರೋಗ್ಯ ಇಲಾಖೆಯ ವೈದ್ಯಕೀಯ ನೀತಿ ವಿಭಾಗದ ನಿರ್ದೇಶಕ ಚುನ್ ಬ್ಯುಂಗ್‍ವಾಂಗ್ ಸೋಮವಾರ ಹೇಳಿದ್ದಾರೆ.
ಒಂದು ವೇಳೆ ತರಬೇತಿ ವೈದ್ಯರು ಕೆಲಸಕ್ಕೆ ಮರಳಿದರೆ ಅವರಿಗೆ ಭದ್ರತೆ ಒದಗಿಸಲಾಗುವುದು ಮತ್ತು ಅವರ ವಿರುದ್ಧದ ಕಾನೂನು ಕ್ರಮವನ್ನು ರದ್ದುಪಡಿಸಲಾಗುವುದು ಎಂದವರು ಹೇಳಿದ್ದಾರೆ. ಲೈಸೆನ್ಸ್ 3 ತಿಂಗಳ ಅವಧಿಗೆ ಅಮಾನತುಗೊಂಡರೆ ತಜ್ಞರಾಗಿ ಅರ್ಹತೆ ಪಡೆಯುವ ಸಾಮರ್ಥ್ಯ ಕನಿಷ್ಠ 1 ವರ್ಷ ವಿಳಂಬಗೊಳಿಸಲಿದೆ ಎಂದು ಸರಕಾರ ಹೇಳಿದೆ.