ದಕ್ಷಿಣ ಕೊರಿಯಾ ರಕ್ಷಣಾ ಸಚಿವರ ರಾಜೀನಾಮೆ
ಸಿಯೋಲ್ : ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಅವರು ರಕ್ಷಣಾ ಸಚಿವ ಕಿಮ್ ಯೋಂಗ್- ಹ್ಯುನ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದು ಸೌದಿ ಅರೆಬಿಯಾದಲ್ಲಿ ರಾಯಭಾರಿ ಆಗಿರುವ ಚೊಯಿ ಬ್ಯುಂಗ್-ಹ್ಯುಕ್ ಅವರನ್ನು ನೂತನ ರಕ್ಷಣಾ ಸಚಿವರನ್ನಾಗಿ ನೇಮಿಸಿರುವುದಾಗಿ ಅಧ್ಯಕ್ಷರ ಕಚೇರಿ ಗುರುವಾರ ಮಾಹಿತಿ ನೀಡಿದೆ.
ಮಂಗಳವಾರ ರಾತ್ರಿ ಅಧ್ಯಕ್ಷ ಯೂನ್ ದೇಶದಲ್ಲಿ ಸೇನಾಡಳಿತ ಜಾರಿಗೊಳಿಸುವಲ್ಲಿ ರಕ್ಷಣಾ ಸಚಿವ ಕಿಮ್ ಯೋಂಗ್ ಅವರು ಪ್ರಧಾನ ಪಾತ್ರ ವಹಿಸಿದ್ದರು ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಅಧ್ಯಕ್ಷ ಯೂನ್‍ರನ್ನು ಸಂಸತ್ತಿನಲ್ಲಿ ದೋಷಾರೋಪಣೆಗೆ ಗುರಿಪಡಿಸುವ ನಿರ್ಣಯ ಮಂಡಿಸಲಾಗಿದ್ದು ಅದರಲ್ಲಿ ಸೇನಾಡಳಿತ ಜಾರಿಗೊಳಿಸುವಂತೆ ರಕ್ಷಣಾ ಸಚಿವರು ಶಿಫಾರಸು ಮಾಡಿದ್ದರೆಂದು ಉಲ್ಲೇಖಿಸಲಾಗಿದೆ.
ಬುಧವಾರ ಸಂಸತ್ತಿನ ನಿರ್ಣಯಕ್ಕೆ ಮಣಿದು ಸೇನಾಡಳಿತ ಜಾರಿಯ ಆದೇಶ ಹಿಂಪಡೆದ ಬಳಿಕ ಯೂನ್ ಹೊರಡಿಸಿರುವ ಪ್ರಥಮ ಅಧಿಕೃತ ಆದೇಶದಲ್ಲಿ ನೂತನ ರಕ್ಷಣಾ ಸಚಿವರ ನೇಮಕವನ್ನು ಘೋಷಿಸಲಾಗಿದೆ.
ಈ ಮಧ್ಯೆ, ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಅವರು ಸೇನಾಡಳಿತ ಜಾರಿಯನ್ನು ಘೋಷಿಸಿದ್ದು ತಮಗೆ ಅಚ್ಚರಿ ತಂದಿದೆ. ಇದು ಸಂಪೂರ್ಣ ತಪ್ಪು ಲೆಕ್ಕಾಚಾರದ ಪ್ರಕ್ರಿಯೆ ಎಂದು ಮಿತ್ರರಾಷ್ಟ್ರ ಅಮೆರಿಕದ ಸಹಾಯಕ ವಿದೇಶಾಂಗ ಸಚಿವ ಕರ್ಟ್ ಕ್ಯಾಂಬೆಲ್ ಪ್ರತಿಕ್ರಿಯಿಸಿದ್ದಾರೆ.