ವಿನಾಶದ ಅಂಚಿಗೆ ಸುನಾಕ್ ಪಕ್ಷ: ಸಮೀಕ್ಷೆ
ಲಂಡನ್: ಬ್ರಿಟನ್ ನಲ್ಲಿ ಜುಲೈ 4ರಂದು ನಡೆಯುವ ಚುನಾವಣೆಯಲ್ಲಿ ಪ್ರಧಾನಿ ರಿಷಿ ಸುನಾಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷಕ್ಕೆ ಹೀನಾಯ ಸೋಲು ಎದುರಾಗಲಿದ್ದು, ಪಕ್ಷ ವಿನಾಶದ ಅಂಚಿಗೆ ತಲುಪುವ ನಿರೀಕ್ಷೆ ಇದೆ ಎಂದು ಶನಿವಾರ ಬಿಡುಗಡೆ ಮಾಡಲಾದ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶವೊಂದು ವಿವರಿಸಿದೆ.
ಚುನಾವಣೆ ಘೋಷಣೆ ಬಳಿಕ ಪ್ರಚಾರ ಕಾರ್ಯ ಅರ್ಧದ ಹಂತಕ್ಕೆ ತಲುಪಿದ್ದು, ಕನ್ಸರ್ವೇಟಿವ್ ಮತ್ತು ಲೇಬರ್ ಪಕ್ಷಗಳು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಒಂದು ವಾರದಲ್ಲಿ ಮತ್ತು ಮತದಾರರು ಶೀಘ್ರದಲ್ಲೇ ಅಂಚೆ ಮತಪತ್ರಗಳನ್ನು ಪಡೆಯುವ ಸಂದರ್ಭದಲ್ಲಿ ಈ ಸಮೀಕ್ಷೆ ಫಲಿತಾಂಶ ಪ್ರಕಟವಾಗಿದೆ.
ಮೇ 22ರಂದು ಅವಧಿಪೂರ್ವ ಚುನಾವಣೆ ಘೋಷಿಸುವ ಮೂಲಕ ಸುನಾಕ್ ಸ್ವಪಕ್ಷೀಯರಲ್ಲೇ ಅಚ್ಚರಿ ಮೂಡಿಸಿದ್ದರು. 40 ವರ್ಷಗಳಲ್ಲೇ ಗರಿಷ್ಠ ಹಣದುಬ್ಬರವನ್ನು ಕಂಡ ದೇಶದಲ್ಲಿ ಜೀವನಮಟ್ಟ ಸುಧಾರಿಸುವ ವರೆಗೆ ಅಂದರೆ ಈ ವರ್ಷದ ಅಂತ್ಯದವರೆಗೆ ಚುನಾವಣೆಯನ್ನು ಮುಂದೂಡಲಿದ್ದಾರೆ ಎಂಬ ನಿರೀಕ್ಷೆ ವ್ಯಾಪಕವಾಗಿ ಇತ್ತು.
ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾದ ಸವಂತಾ ಸಮೀಕ್ಷೆ ಪ್ರಕಾರ ಶೇಕಡ 46ರಷ್ಟು ಮಂದಿ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷದ ಪರ ಒಲವು ವ್ಯಕ್ತಪಡಿಸಿದ್ದಾರೆ. ಐದು ದಿನಗಳ ಹಿಂದೆ ನಡೆಸಿದ ಸಮೀಕ್ಷೆಗಿಂತ ಇದು ಶೇಕಡ 2ರಷ್ಟು ಅಧಿಕ. ಕನ್ಸರ್ವೇಟಿವ್ ಪಕ್ಷದ ಬೆಂಬಲ ಶೇಕಡ 4ರಷ್ಟು ಕುಸಿದು ಶೇಕಡ 21ಕ್ಕೆ ಇಳಿದಿದೆ. ಈ ಸಮೀಕ್ಷೆಯನ್ನು ಜೂನ್ 12 ರಿಂದ 14ರ ನಡುವೆ ಸಂಡೇ ಟೆಲಿಗ್ರಾಫ್ ಗಾಗಿ ಕೈಗೊಳ್ಳಲಾಗಿತ್ತು.
ಈ ಚುಣಾವಣೆ ಕನ್ಸರ್ವೇಟಿವ್ ಪಕ್ಷದ ಚುನಾವಣಾ ವಿನಾಶಕ್ಕೆ ಕಾರಣವಾಗಲಿದೆ ಎನ್ನುವುದು ನಮ್ಮ ಸಂಶೋಧನೆಯಿಂದ ತಿಳಿದು ಬಂದಿದೆ ಎಂದು ಸವಂತಾ ರಾಜಕೀಯ ಸಂಶೋಧನಾ ನಿರ್ದೇಶಕ ಕ್ರಿಸ್ ಹಾಕಿನ್ಸ್ ಹೇಳಿದ್ದಾರೆ.