7 ದಿನದೊಳಗೆ ಅಕ್ರಮ ಬಂದೂಕು ಒಪ್ಪಿಸಿ : ಪ್ರತಿಭಟನಾಕಾರರಿಗೆ ಮಧ್ಯಂತರ ಸರಕಾರದ ಸೂಚನೆ
ಢಾಕಾ : ಅಕ್ರಮ ಮತ್ತು ಅನಧಿಕೃತ ಬಂದೂಕುಗಳು ಹಾಗೂ ಪ್ರತಿಭಟನೆಯ ಸಂದರ್ಭ ಅಧಿಕಾರಿಗಳಿಂದ ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ಆಗಸ್ಟ್ 19ರ ಒಳಗೆ ಒಪ್ಪಿಸುವಂತೆ ಬಾಂಗ್ಲಾದೇಶದ ಆಂತರಿಕ ಸರಕಾರದ ಗೃಹ ವ್ಯವಹಾರಗಳ ಸಲಹೆಗಾರ ಬ್ರಿಗೇಡಿಯರ್ ಜನರಲ್ (ನಿವೃತ್ತ) ಎಂ. ಸಖಾವತ್ ಹುಸೇನ್ ಪ್ರತಿಭಟನಾಕಾರರಿಗೆ ಸೂಚಿಸಿರುವುದಾಗಿ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
ಇಂತಹ ಬಂದೂಕುಗಳನ್ನು ಸಮೀಪದ ಪೊಲೀಸ್ ಠಾಣೆಗೆ ಮರಳಿಸದಿದ್ದರೆ ಪೊಲೀಸರು ಶಂಕಿತರ ಮನೆಯಲ್ಲಿ ಶೋಧ ನಡೆಸಿ, ಅಕ್ರಮ ಬಂದೂಕು ಪತ್ತೆಯಾದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹುಸೇನ್ ಸೂಚಿಸಿದ್ದಾರೆ. ಪ್ರತಿಭಟನೆಯ ಸಂದರ್ಭ ವಿದ್ಯಾರ್ಥಿಗಳ ಸಹಿತ ಸುಮಾರು ಮಂದಿ ಸಾವನ್ನಪ್ಪಿದ್ದು ಹಲವು ಸಾವಿರ ಮಂದಿ ಗಾಯಗೊಂಡಿದ್ದಾರೆ.
ಪ್ರತಿಭಟನೆಯ ಸಂದರ್ಭ ವೈರಲ್ ಆಗಿರುವ ವೀಡಿಯೊದಲ್ಲಿ ಓರ್ವ ಯುವಕ ಪೊಲೀಸ್ ಔಟ್ ಪೋಸ್ಟ್ ನಲ್ಲಿದ್ದ 7.62 ಎಂ.ಎಂ ರೈಫಲ್ ಜತೆ ಪರಾರಿಯಾಗಿರುವುದು ಕಂಡುಬಂದಿದೆ. ರೈಫಲ್ ಅನ್ನು ಮರಳಿಸದಿದ್ದರೆ ಗುರುತು ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗುವುದು ಎಂದು ಹುಸೇನ್ ಹೇಳಿದ್ದಾರೆ.