ಸಿರಿಯಾ | ಇಸ್ರೇಲ್ ದಾಳಿಯಲ್ಲಿ 14 ಮಂದಿ ಮೃತ್ಯು

Update: 2024-09-09 16:14 GMT

  ಸಾಂದರ್ಭಿಕ ಚಿತ್ರ

ದಮಾಸ್ಕಸ್ : ರವಿವಾರ ರಾತ್ರಿ ಹಮಾ ಪ್ರಾಂತದಲ್ಲಿ ಇಸ್ರೇಲ್‍ನ ವೈಮಾನಿಕ ದಾಳಿಯಲ್ಲಿ 14 ಮಂದಿ ಸಾವನ್ನಪ್ಪಿದ್ದು ಇತರ 43 ಮಂದಿ ಗಾಯಗೊಂಡಿದ್ದಾರೆ. 8 ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ಸಿರಿಯಾ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ `ಸನಾ' ಸೋಮವಾರ ವರದಿ ಮಾಡಿದೆ.

ರವಿವಾರ ರಾತ್ರಿಯಿಂದ ನಡೆದ ಇಸ್ರೇಲ್‍ನ `ಕ್ರಿಮಿನಲ್' ದಾಳಿಯಲ್ಲಿ 18 ಮಂದಿ ಮೃತಪಟ್ಟಿದ್ದು ಇತರ 32 ಮಂದಿ ಗಾಯಗೊಂಡಿದ್ದಾರೆ ಎಂದು ಮಾನವ ಹಕ್ಕುಗಳ ಸಿರಿಯನ್ ವೀಕ್ಷಣಾಲಯದ ವರದಿ ಹೇಳಿದೆ.

ರವಿವಾರ ರಾತ್ರಿ 11.20 ಗಂಟೆಗೆ ಇಸ್ರೇಲ್ ಶತ್ರು ವಾಯವ್ಯ ಲೆಬನಾನ್ ದಿಕ್ಕಿನಿಂದ ಮಧ್ಯ ಸಿರಿಯಾದ ಹಲವಾರು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಸರಣಿ ಕ್ಷಿಪಣಿ ದಾಳಿ ನಡೆದಿದೆ. ನಮ್ಮ ವಾಯುರಕ್ಷಣಾ ವ್ಯವಸ್ಥೆ ಕೆಲವು ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ಹಮಾ ಪ್ರಾಂತದಲ್ಲಿರುವ ವೈಜ್ಞಾನಿಕ ಸಂಶೋಧನಾ ಕೇಂದ್ರದ ಪ್ರದೇಶವನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಹಲವು ಕಟ್ಟಡಗಳು ಹಾಗೂ ಮಿಲಿಟರಿ ನೆಲೆಗಳಿಗೆ ಹಾನಿಯಾಗಿದೆ ಎಂದು ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ ಸಿರಿಯಾದ ಸನಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಇರಾನ್ ಪರವಿರುವ ಗುಂಪುಗಳು ಹಾಗೂ ಶಸ್ತ್ರಾಸ್ತ್ರ ಅಭಿವೃದ್ಧಿ ತಜ್ಞರು ಕಾರ್ಯ ನಿರ್ವಹಿಸುತ್ತಿದ್ದ ಕೇಂದ್ರವನ್ನು ಗುರಿಯಾಗಿಸಿ ದಾಳಿ ನಡೆದಿದೆ ಎಂದು ಮತ್ತೊಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News