ಸಿರಿಯಾ | ಹಮಾ ನಗರದ ಬಳಿ ಸೇನೆ-ಬಂಡುಕೋರರ ಮಧ್ಯೆ ತೀವ್ರ ಸಂಘರ್ಷ
ದಮಾಸ್ಕಸ್ : ಸಿರಿಯಾದ ಹಮಾ ನಗರದ ಉತ್ತರದಲ್ಲಿ ಸರ್ಕಾರಿ ಪಡೆ ಹಾಗೂ ಬಂಡುಕೋರ ಪಡೆಯ ನಡುವೆ ತೀವ್ರ ಸಂಘರ್ಷ ಮುಂದುವರಿದಿದ್ದು ವ್ಯಾಪಕ ವೈಮಾನಿಕ ದಾಳಿ ಹಾಗೂ ಹೆಚ್ಚುವರಿ ಪಡೆಗಳ ಆಗಮನದಿಂದಾಗಿ ಸರ್ಕಾರಿ ಪಡೆಗಳು ಬಂಡುಕೋರ ಪಡೆಯನ್ನು ಹಮಾ ನಗರದ ಅಂಚಿನಿಂದ ಹಿಂದಕ್ಕೆ ಸರಿಸಲು ಶಕ್ತವಾಗಿದೆ ಎಂದು ಮೂಲಗಳು ಹೇಳಿವೆ.
ಕಳೆದ ವಾರ ಬಂಡುಕೋರರು ಸಿರಿಯಾದ ಅತೀ ದೊಡ್ಡ ನಗರ ಅಲೆಪ್ಪೋ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ವಶಪಡಿಸಿಕೊಂಡಿದ್ದು ಮಂಗಳವಾರ ಹಮಾ ನಗರದ ಹೊರವಲಯವನ್ನು ತಲುಪಿದ್ದರು. ಹಮಾದಿಂದ ಈಶಾನ್ಯಕ್ಕೆ 5 ಕಿ.ಮೀ ದೂರದಲ್ಲಿರುವ ಜಬಲ್ ಝೈನ್ ಅಲ್-ಅಬಿದಿನ್ ಬೆಟ್ಟದ ಬಳಿ ಹಾಗೂ ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ತೀವ್ರ ಸಂಘರ್ಷ ಮುಂದುವರಿದಿದೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ಹಾಗೂ ಮಾನವ ಹಕ್ಕುಗಳ (ಸಿರಿಯಾ) ಏಜೆನ್ಸಿ ಬುಧವಾರ ಮಾಹಿತಿ ನೀಡಿದೆ.
ತೀವ್ರ ಬಾಂಬ್ ದಾಳಿಯಿಂದಾಗಿ ಜಬಲ್ ಝೈನ್ ಅಲ್-ಅಬಿದಿನ್ ಪ್ರದೇಶವನ್ನು ವಶಕ್ಕೆ ಪಡೆಯಲು ತಮ್ಮ ಪಡೆ ವಿಫಲವಾಗಿದೆ ಎಂದು ಬಂಡುಕೋರ ಪಡೆಯ ಮೂಲಗಳು ಹೇಳಿವೆ.