ಫೆಲೆಸ್ತೀನ್ ರಾಷ್ಟ್ರ ರಚನೆಗೆ ಆಗ್ರಹಿಸುವ ನಿರ್ಣಯ ಅಂಗೀಕರಿಸಿದ ವಿಶ್ವಸಂಸ್ಥೆ

Update: 2024-12-04 21:28 IST
Photo of  UN

PC : X/@UN/Twitter

  • whatsapp icon

ವಿಶ್ವಸಂಸ್ಥೆ : ಆಕ್ರಮಿತ ಫೆಲೆಸ್ತೀನ್ ಪ್ರದೇಶಗಳಿಂದ ಇಸ್ರೇಲ್ ಹಿಂದೆ ಸರಿಯಬೇಕು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮಂಗಳವಾರ ಕರೆ ನೀಡಿದ್ದು ಫೆಲೆಸ್ತೀನ್ ರಾಷ್ಟ್ರ ರಚನೆಗೆ ಒತ್ತಾಯಿಸಿದೆ.

ಎರಡು ರಾಷ್ಟ್ರ ಪರಿಹಾರ ಸೂತ್ರ ಜಾರಿಗೆ ಪ್ರಯತ್ನಿಸಲು ಜೂನ್‍ನಲ್ಲಿ ಅಂತರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲು ವಿಶ್ವಸಂಸ್ಥೆ ಸಾಮಾನ್ಯ ಸಭೆ ನಿರ್ಧರಿಸಿದೆ. ಈ ಕುರಿತ ನಿರ್ಣಯವನ್ನು ಸಭೆ 157-8 ಮತಗಳಿಂದ ಅಂಗೀಕರಿಸಿದ್ದು, ಅಮೆರಿಕ ಮತ್ತು ಇಸ್ರೇಲ್ ಸೇರಿದಂತೆ 8 ರಾಷ್ಟ್ರಗಳು ನಿರ್ಣಯವನ್ನು ವಿರೋಧಿಸಿವೆ. 7 ದೇಶಗಳು ಮತದಾನದಲ್ಲಿ ಭಾಗವಹಿಸಲಿಲ್ಲ.

`ಇಸ್ರೇಲ್ ಮತ್ತು ಫೆಲೆಸ್ತೀನ್‍ನ ಎರಡು ರಾಷ್ಟ್ರ ಪರಿಹಾರಕ್ಕಾಗಿ ಅಂತರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಚಲವಾದ ಬೆಂಬಲ ವ್ಯಕ್ತಪಡಿಸಿದೆ. 1967ಕ್ಕಿಂತ ಮೊದಲಿನ ಗಡಿಗಳ ಆಧಾರದಲ್ಲಿ ಎರಡು ರಾಷ್ಟ್ರಗಳು ಅಕ್ಕಪಕ್ಕದಲ್ಲಿ ಶಾಂತಿ ಮತ್ತು ಭದ್ರತೆಯಲ್ಲಿ ವಾಸಿಸಬೇಕು' ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. 2025ರ ಜೂನ್‍ನಲ್ಲಿ ನ್ಯೂಯಾರ್ಕ್‍ನಲ್ಲಿ ಫ್ರಾನ್ಸ್ ಮತ್ತು ಸೌದಿ ಅರೆಬಿಯಾದ ಜಂಟಿ ಅಧ್ಯಕತೆಯಲ್ಲಿ ಉನ್ನತ ಮಟ್ಟದ ಅಂತರಾಷ್ಟ್ರೀಯ ಸಮ್ಮೇಳನ ನಡೆದು ಎರಡು ರಾಷ್ಟ್ರ ಪರಿಹಾರವನ್ನು ವಾಸ್ತವಗೊಳಿಸುವ ರಾಜತಾಂತ್ರಿಕ ಪ್ರಯತ್ನಗಳಿಗೆ ಹೊಸ ಉಸಿರು ತುಂಬಬೇಕು. ಪ್ರಾಥಮಿಕವಾಗಿ ಸ್ವಯಂ ನಿರ್ಣಯದ ಹಕ್ಕು ಮತ್ತು ಸ್ವತಂತ್ರ ರಾಷ್ಟ್ರದ ಹಕ್ಕು ಸೇರಿದಂತೆ ಫೆಲೆಸ್ತೀನಿ ಜನರ ಬೇರ್ಪಡಿಸಲಾಗದ ಹಕ್ಕುಗಳು ಅವರಿಗೆ ಸಲ್ಲಬೇಕು ಎಂದು ನಿರ್ಣಯದಲ್ಲಿ ಆಗ್ರಹಿಸಲಾಗಿದೆ.

ಫೆಲೆಸ್ತೀನ್ ರಾಷ್ಟ್ರದ ಪ್ರಶ್ನೆ ವಿಶ್ವಸಂಸ್ಥೆ ಸ್ಥಾಪನೆಯಾದಂದಿನಿಂದಲೂ ವಿಶ್ವಸಂಸ್ಥೆಯ ಅಜೆಂಡಾದಲ್ಲಿದೆ ಮತ್ತು ಈ ವಿಷಯ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆ ಮತ್ತು ಅಧಿಕಾರಕ್ಕೆ ಸಂಬಂಧಿಸಿದ ನಿರ್ಣಾಯಕ ಪರೀಕ್ಷೆಯಾಗಿದೆ ಎಂದು ವಿಶ್ವಸಂಸ್ಥೆಗೆ ಫೆಲೆಸ್ತೀನ್ ರಾಯಭಾರಿ ರಿಯಾದ್ ಮನ್ಸೂರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News