ಸಿರಿಯಾ | ವೈಮಾನಿಕ ದಾಳಿಯಲ್ಲಿ 300ಕ್ಕೂ ಹೆಚ್ಚು ಬಂಡುಕೋರರ ಮೃತ್ಯು
ದಮಾಸ್ಕಸ್ : ಸಿರಿಯಾದ ಅಲೆಪ್ಪೋ ನಗರದ ಮೇಲೆ ನಿಯಂತ್ರಣ ಸಾಧಿಸಿ ದಕ್ಷಿಣ ಪ್ರಾಂತದಲ್ಲಿ ಮುನ್ನುಗ್ಗುತ್ತಿರುವ ಬಂಡುಕೋರ ಪಡೆಯ ವಿರುದ್ಧ ರಶ್ಯ ನಡೆಸಿದ ವೈಮಾನಿಕ ದಾಳಿಯಲ್ಲಿ ಬಂಡುಕೋರ ಪಡೆಯ 300ಕ್ಕೂ ಅಧಿಕ ಯೋಧರು ಹತರಾಗಿರುವುದಾಗಿ ರಶ್ಯದ ರಕ್ಷಣಾ ಇಲಾಖೆ ಹೇಳಿದೆ.
ಸಿರಿಯಾ ಅಧ್ಯಕ್ಷ ಬಶರ್ - ಅಲ್ ಅಸ್ಸಾದ್ ಮತ್ತು ಸಿರಿಯಾ ಸೇನೆಯನ್ನು ಬೆಂಬಲಿಸಿ ಈ ದಾಳಿ ನಡೆದಿರುವುದಾಗಿ ರಶ್ಯದ ಮಾಧ್ಯಮಗಳು ವರದಿ ಮಾಡಿವೆ. 2020ರ ಬಳಿಕ ಸಿರಿಯಾದಲ್ಲಿ ಬಂಡುಕೋರ ಪಡೆ ನಡೆಸಿದ ಅತ್ಯಂತ ಉಗ್ರ ದಾಳಿಯಲ್ಲಿ ಅಲೆಪ್ಪೋ ನಗರವನ್ನು ವಶಪಡಿಸಿಕೊಂಡಿತ್ತು. ಆದರೆ ಬಂಡುಕೋರರನ್ನು ಹಿಮ್ಮೆಟ್ಟಿಸಲು ತೀವ್ರ ಪ್ರತಿದಾಳಿ ಆರಂಭಿಸಿರುವುದಾಗಿ ಸಿರಿಯಾ ಸೇನೆ ಹೇಳಿದೆ. ಅಲೆಪ್ಪೋ ನಗರದಲ್ಲಿ ಗಸ್ತು ತಿರುಗುತ್ತಿದ್ದ ಬಂಡುಕೋರ ಪಡೆಯನ್ನು ಗುರಿಯಾಗಿಸಿ ರಶ್ಯ ತೀವ್ರ ವೈಮಾನಿಕ ದಾಳಿ ನಡೆಸಿದೆ. ಈ ಜಂಟಿ ದಾಳಿಯಲ್ಲಿ ಬಂಡುಕೋರರ ಕನಿಷ್ಠ 100 ಯೋಧರು ಹತರಾಗಿರುವುದಾಗಿ ರಶ್ಯದ ತಾಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಲೆಪ್ಪೋ ವಿಮಾನ ನಿಲ್ದಾಣವನ್ನೂ ವಶಕ್ಕೆ ಪಡೆದಿರುವುದಾಗಿ ಬಂಡುಕೋರ ಪಡೆಯ ಮೂಲಗಳು ಹಾಗೂ ಭದ್ರತಾ ಪಡೆ ಹೇಳಿದೆ. ಇದ್ಲಿಬ್ ಪ್ರಾಂತದ ಮರಾತ್ ಅಲ್ ನುಮಾನ್ ನಗರವನ್ನೂ ವಶಕ್ಕೆ ಪಡೆದಿರುವುದಾಗಿ ಬಂಡುಕೋರ ಪಡೆಯ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಹಯಾತ್ ತಹ್ರೀರ್ ಅಲ್-ಶಾಮ್ ಎಂಬ ಬಂಡುಕೋರ ಪಡೆಯನ್ನು ಭಯೋತ್ಪಾದಕ ಸಂಘಟನೆಯೆಂದು ಅಮೆರಿಕ, ರಶ್ಯ ಹಾಗೂ ಇತರ ಕೆಲವು ದೇಶಗಳು ಹೆಸರಿಸಿವೆ. ರಶ್ಯದ ಆಪ್ತಮಿತ್ರನಾಗಿರುವ ಅಧ್ಯಕ್ಷ ಅಸಾದ್ ಹಾಗೂ ಸಿರಿಯಾದ ಸೇನೆಗೆ ಇರಾನ್ ಕೂಡಾ ಬೆಂಬಲ ಘೋಷಿಸಿದೆ. ವಾಯವ್ಯ ಸಿರಿಯಾದಲ್ಲಿ ಬಂಡುಕೋರ ಪಡೆಯನ್ನು ಬೆಂಬಲಿಸುತ್ತಿರುವ ಟರ್ಕಿ ಅಲ್ಲಿ ತನ್ನ ಪಡೆಯನ್ನು ನಿಯೋಜಿಸಿದೆ. ಐಸಿಸ್ ಉಗ್ರರ ವಿರುದ್ಧದ ಕಾರ್ಯಾಚರಣೆಯ ಅಂಗವಾಗಿ ಅಮೆರಿಕ ಈಶಾನ್ಯ ಸಿರಿಯಾದಲ್ಲಿ ಸುಮಾರು 900 ಸದಸ್ಯರ ತುಕಡಿಯನ್ನು ಇರಿಸಿದೆ. ಈ ಪ್ರದೇಶದಲ್ಲಿ ಸಿರಿಯಾ ಸರಕಾರಿ ಪರ ಪಡೆ ಹಾಗೂ ಇರಾನ್ ಬೆಂಬಲಿತ ಸಶಸ್ತ್ರ ಹೋರಾಟಗಾರರ ಪಡೆಯ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಸಾಂದರ್ಭಿಕ ದಾಳಿಗಳನ್ನು ನಡೆಸುತ್ತಿವೆ. ಆದರೆ ಪ್ರಸ್ತುತ ಬಂಡುಗೋರ ಪಡೆ ಅಲೆಪ್ಪೋದ ಮೇಲೆ ನಡೆಸಿದ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಈ ವಾರದ ಆರಂಭದಲ್ಲಿ ಅಲೆಪ್ಪೋ ನಗರದ ಮೇಲೆ ನಾಲ್ಕೂ ದಿಕ್ಕಿನಿಂದ ದಾಳಿ ನಡೆಸಿದ ಬಂಡುಕೋರರು ನಗರವನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.
ಉದ್ವಿಗ್ನತೆ ಶಮನಕ್ಕೆ 2020ರಲ್ಲಿ ರಶ್ಯ ಮತ್ತು ಟರ್ಕಿ ನಡುವೆ ನಡೆದ ಒಪ್ಪಂದದ ಬಳಿಕ ವಾಯವ್ಯ ಸಿರಿಯಾದಲ್ಲಿ ಸಂಘರ್ಷ ಬಹುತೇಕ ಅಂತ್ಯಗೊಂಡಿತ್ತು. ರಶ್ಯ ಮತ್ತು ಇರಾನ್ ಬೆಂಬಲದಿಂದಾಗಿ 2015ರಲ್ಲಿ ಸಿರಿಯಾ ಸರಕಾರ ದೇಶದ ಹೆಚ್ಚಿನ ಭಾಗವನ್ನು ಮತ್ತು 2016ರಲ್ಲಿ ಅಲೆಪ್ಪೋ ನಗರದ ಮೇಲಿನ ನಿಯಂತ್ರಣವನ್ನು ಮತ್ತೆ ಪಡೆದುಕೊಂಡಿತ್ತು. ಆದರೆ ಬುಧವಾರದಿಂದ ಆಕ್ರಮಣ ತೀವ್ರಗೊಳಿಸಿರುವ ಬಂಡುಕೋರ ಪಡೆ ಅಲೆಪ್ಪೋದ ವಿಮಾನ ನಿಲ್ದಾಣ, ಸಮೀಪದ ಪಟ್ಟಣಗಳ ಮೇಲೆ ನಿಯಂತ್ರಣ ಸಾಧಿಸಿದೆ.
►ಅಸ್ಸಾದ್‍ಗೆ ದೃಢ ಬೆಂಬಲ : ಇರಾನ್
ಸಿರಿಯಾದ ಸರಕಾರ ಮತ್ತು ಸಶಸ್ತ್ರ ಪಡೆಗಳಿಗೆ ಇರಾನ್‍ನ ದೃಢ ಬೆಂಬಲ ಮುಂದುವರಿಯಲಿದೆ ಎಂಬ ಸಂದೇಶವನ್ನು ರವಾನಿಸಲು ತಾನು ಸಿರಿಯಾಕ್ಕೆ ಭೇಟಿ ನೀಡುವುದಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ರವಿವಾರ ಹೇಳಿದ್ದಾರೆ.
ಸಿರಿಯಾದಲ್ಲಿ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಅವರು ಟರ್ಕಿಗೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.
2011ರಲ್ಲಿ ಸಿರಿಯಾದಲ್ಲಿ ಭುಗಿಲೆದ್ದ ಅಂತರ್ಯುದ್ಧದ ಸಮಯದಲ್ಲಿ ಇರಾನ್ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರ ಬದ್ಧ ಮಿತ್ರನಾಗಿತ್ತು. ಆದರೆ ಸಿರಿಯಾದಲ್ಲಿ ತಾನು ಯುದ್ಧಪಡೆಗಳನ್ನು ಹೊಂದಿಲ್ಲ, ಮಿಲಿಟರಿ ಸಲಹೆ ಮತ್ತು ತರಬೇತಿ ಒದಗಿಸುತ್ತಿರುವ ಅಧಿಕಾರಿಗಳು ಮಾತ್ರ ಅಲ್ಲಿದ್ದಾರೆ ಎಂದು ಇರಾನ್ ಹೇಳುತ್ತಿದೆ. ಲೆಬನಾನ್‍ನಲ್ಲಿರುವ ಇರಾನ್ ಬೆಂಬಲಿತ ಹಿಜ್ಬುಲ್ಲಾ ಕೂಡಾ ಸಿರಿಯಾ ಸರಕಾರದ ಪರ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದೆ.
ಸಿರಿಯಾ ಸರಕಾರ ಮತ್ತು ಸೇನೆಯನ್ನು ಇರಾನ್ ದೃಢವಾಗಿ ಬೆಂಬಲಿಸುತ್ತದೆ ಎಂದು ಅರಾಘ್ಚಿಯನ್ನು ಉಲ್ಲೇಖಿಸಿ ಇರಾನ್‍ನ ಸರ್ಕಾರಿ ಸ್ವಾಮ್ಯದ ಇರ್ನಾ ಸುದ್ದಿಸಂಸ್ಥೆ ವರದಿ ಮಾಡಿದೆ. ಅಲೆಪ್ಪೋ ನಗರವನ್ನು ಬಂಡುಕೋರ ಪಡೆ ನಿಯಂತ್ರಣಕ್ಕೆ ಪಡೆಯುವುದರ ಹಿಂದೆ ಅಮೆರಿಕದ ಕೈವಾಡವಿದೆ. ಈ ಹಿಂದೆ ಮಾಡಿದಂತೆಯೇ ಸಿರಿಯಾ ಸೇನೆ ಮತ್ತೊಮ್ಮೆ ಈ ಗುಂಪಿನ ಎದುರು ಗೆಲುವು ಸಾಧಿಸಲಿದೆ ಎಂದು ಇರಾನ್ ವಿದೇಶಾಂಗ ಸಚಿವರು ಹೇಳಿದ್ದಾರೆ.
ಈ ಮಧ್ಯೆ, ಅಲೆಪ್ಪೋದಲ್ಲಿರುವ ಇರಾನ್‍ನ ಕಾನ್ಸುಲೇಟ್ ಮೇಲೆ ದಾಳಿ ಶನಿವಾರ ನಡೆದಿದೆ. ಆದರೆ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ಇರಾನ್ ನ ವಿದೇಶಾಂಗ ಇಲಾಖೆ ಹೇಳಿದೆ.