ಹೋಮ್ಸ್ ನಗರದತ್ತ ಮುನ್ನುಗ್ಗಿದ ಬಂಡುಕೋರ ಪಡೆ | ಸಿರಿಯಾ ಅಧ್ಯಕ್ಷ ಬಶರ್ ಅಸ್ಸಾದ್ ಗೆ ಹಿನ್ನಡೆ
ದಮಾಸ್ಕಸ್ : ಸಿರಿಯಾದ ಬಂಡುಕೋರ ಪಡೆ ಉತ್ತರದಲ್ಲಿ ಅಲೆಪ್ಪೋ ನಗರ ಮತ್ತು ಮಧ್ಯ ಸಿರಿಯಾದ ಹಮಾ ನಗರವನ್ನು ವಶಕ್ಕೆ ಪಡೆಯುವಲ್ಲಿ ಸಫಲವಾಗಿದ್ದು ಇದೀಗ ಮತ್ತೊಂದು ನಗರ ಹೋಮ್ಸ್ ನತ್ತ ಮುನ್ನುಗ್ಗಿದೆ ಎಂದು ವರದಿಯಾಗಿದೆ.
ಗುರುವಾರ ರಾತ್ರಿಯಿಂದ ಹೋಮ್ಸ್ ನಗರದ ಸುತ್ತಮುತ್ತ ಸರ್ಕಾರಿ ಪಡೆ ಹಾಗೂ ಬಂಡುಕೋರ ಪಡೆಯ ನಡುವೆ ಭೀಕರ ಸಂಘರ್ಷ ನಡೆಯುತ್ತಿದೆ. ಬಂಡುಕೋರ ಪಡೆ ಹೋಮ್ಸ್ನ ದ್ವಾರದ ಬಳಿ ತಲುಪಿದೆ. ಹೋಮ್ಸ್ ಕೂಡಾ ಬಂಡುಕೋರರ ವಶಕ್ಕೆ ಬಂದರೆ ಅಧ್ಯಕ್ಷ ಅಸ್ಸಾದ್ ಗೆ ತೀವ್ರ ಹಿನ್ನಡೆಯಾಗಲಿದೆ. ಬಂಡುಕೋರರ ಮಿಂಚಿನ ದಾಳಿಯಿಂದ ಕಂಗೆಟ್ಟ ಸಾವಿರಾರು ಜನರು ಹಮಾ, ಹೋಮ್ಸ್ ನಗರಗಳಿಂದ ಸರಕಾರದ ಭದ್ರಕೋಟೆಯಾಗಿರುವ ಪಶ್ಚಿಮ ಕರಾವಳಿಯತ್ತ ಪಲಾಯನ ಮಾಡುತ್ತಿರುವುದಾಗಿ ಮಾನವ ಹಕ್ಕುಗಳ ಸಿರಿಯಾ ವೀಕ್ಷಣಾ ಏಜೆನ್ಸಿ ಹೇಳಿದೆ.
ಈ ಮಧ್ಯೆ, ಹೋಮ್ಸ್ನತ್ತ ಮುಂದೊತ್ತಿ ಬರುತ್ತಿರುವ ಬಂಡುಕೋರರನ್ನು ತಡೆಯಲು ನಗರವನ್ನು ಸಂಪರ್ಕಿಸುವ ಪ್ರಮುಖ ಸೇತುವೆಯನ್ನು ರಶ್ಯ ಬಾಂಬ್ದಾಳಿಯಲ್ಲಿ ಧ್ವಂಸಗೊಳಿಸಿದೆ. ಇದೀಗ ಹೋಮ್ಸ್ ನತ್ತ ಹೆಚ್ಚುವರಿ ಸರ್ಕಾರಿ ಪಡೆಗಳನ್ನು ರವಾನಿಸಲಾಗಿದೆ ಎಂದು ಸಿರಿಯಾ ಸೇನಾಧಿಕಾರಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಸಿರಿಯಾ ಅಧ್ಯಕ್ಷ ಅಸ್ಸಾದ್ ಪದಚ್ಯುತಿ ನಮ್ಮ ಗುರಿ : ಬಂಡುಕೋರ ಪಡೆ
ಲಭ್ಯವಿರುವ ಎಲ್ಲಾ ವಿಧಾನಗಳನ್ನು ಬಳಸಿ ಅಧ್ಯಕ್ಷ ಬಶರ್ ಅಸ್ಸಾದ್ ಆಡಳಿತವನ್ನು ಕಿತ್ತೊಗೆಯುವುದು ತಮ್ಮ ಗುರಿಯಾಗಿದೆ ಎಂದು ಸಿರಿಯಾದ ಬಂಡುಕೋರ ಪಡೆಯ ನಾಯಕ ಅಬು ಮುಹಮ್ಮದ್ ಅಲ್-ಜೊಲಾನಿ ಹೇಳಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.
ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಈ ಕ್ರಾಂತಿಯ ಗುರಿ ಈ ಆಡಳಿತವನ್ನು ಕಿತ್ತೊಗೆಯುವುದು ಮತ್ತು ಗುರಿ ತಲುಪಲು ಲಭ್ಯವಿರುವ ಎಲ್ಲಾ ವಿಧಾನಗಳನ್ನೂ ಬಳಸುತ್ತೇವೆ' ಎಂದು ಅವರು ಹೇಳಿದ್ದಾರೆ.
ಹಯಾತ್ ತಹ್ರೀರ್ ಅಲ್-ಶಾಮ್(ಎಚ್ಟಿಎಸ್) ಗುಂಪಿನ ನೇತೃತ್ವದ ಬಂಡುಕೋರ ಪಡೆಯ ಒಕ್ಕೂಟ ನವೆಂಬರ್ 27ರಂದು ಆರಂಭಿಸಿದ್ದ ಮಿಂಚಿನ ಆಕ್ರಮಣದಲ್ಲಿ ಸಿರಿಯಾದ ಪ್ರಮುಖ ನಗರಗಳಾದ ಅಲೆಪ್ಪೋ ಮತ್ತು ಹಮಾ ಈಗಾಗಲೇ ಬಂಡುಕೋರ ಪಡೆಯ ನಿಯಂತ್ರಣಕ್ಕೆ ಬಂದಿದೆ.