ಸಿರಿಯಾ ರಾಜಧಾನಿ ಸಮೀಪಿಸಿದ ಬಂಡುಕೋರ ಪಡೆ | ಮತ್ತೊಂದು ಪ್ರಮುಖ ನಗರ ವಶಕ್ಕೆ
ದಮಾಸ್ಕಸ್ : ಸಿರಿಯಾದಲ್ಲಿ ಬಂಡುಕೋರ ಪಡೆ ಉತ್ತರದಲ್ಲಿ ಅಲೆಪ್ಪೋ ನಗರ ಮತ್ತು ಮಧ್ಯ ಸಿರಿಯಾದ ಹಮಾ ನಗರವನ್ನು ವಶಕ್ಕೆ ಪಡೆದ ಬಳಿಕ ಮೂರನೇ ಪ್ರಮುಖ ನಗರ ದರಾ ಕೂಡಾ ಸರ್ಕಾರಿ ಪಡೆಗಳ ಕೈತಪ್ಪಿದೆ. ಬಂಡುಕೋರ ಪಡೆ ಇದೀಗ ರಾಜಧಾನಿ ದಮಾಸ್ಕಸ್‍ನಿಂದ ಕೇವಲ 20 ಕಿ.ಮೀ ದೂರದಲ್ಲಿದ್ದು ನಿರಂತರ ಮುನ್ನಡೆ ಸಾಧಿಸುತ್ತಿದೆ ಎಂದು ವರದಿಯಾಗಿದೆ.
ಹಯಾತ್ ತಹ್ರೀರ್ ಅಲ್-ಶಾಮ್(ಎಚ್‍ಟಿಎಸ್) ಗುಂಪಿನ ನೇತೃತ್ವದ ಬಂಡುಕೋರ ಪಡೆಯ ಒಕ್ಕೂಟ ಅಲೆಪ್ಪೋ ಮತ್ತು ಹಮಾ ನಗರವನ್ನು ವಶಕ್ಕೆ ಪಡೆದು ಹೋಮ್ಸ್ ನಗರದ ಮೇಲೆ ಬಹುತೇಕ ನಿಯಂತ್ರಣ ಸಾಧಿಸಲು ಶಕ್ತವಾಗಿದ್ದರೆ, ಮತ್ತೊಂದು ಪ್ರಮುಖ ನಗರ, ಅಧ್ಯಕ್ಷ ಬಶರ್ ಅಸ್ಸಾದ್ ವಿರುದ್ಧದ 2011ರ ದಂಗೆಯ ಜನ್ಮಸ್ಥಳ ದರಾ ನಗರವನ್ನು ಸ್ಥಳೀಯ ಸಶಸ್ತ್ರ ಹೋರಾಟಗಾರರ ಗುಂಪು ವಶಕ್ಕೆ ಪಡೆದಿದೆ. ದರಾ ಪ್ರಾಂತದ 90% ಪ್ರದೇಶ ಈಗ ಸಶಸ್ತ್ರ ಹೋರಾಟಗಾರರ ನಿಯಂತ್ರಣದಲ್ಲಿದೆ. ಸುಮಾರು 100 ಕಿ.ಮೀ ದೂರದಲ್ಲಿರುವ ರಾಜಧಾನಿ ದಮಾಸ್ಕಸ್‍ಗೆ ಸೇನಾ ಅಧಿಕಾರಿಗಳಿಗೆ ಸುರಕ್ಷಿತ ನಿರ್ಗಮನಕ್ಕೆ ಅವಕಾಶ ನೀಡುವ ಒಪ್ಪಂದದ ಅಡಿಯಲ್ಲಿ ದರಾದಿಂದ ಕ್ರಮಬದ್ಧವಾಗಿ ಸೇನೆಯನ್ನು ಹಿಂದಕ್ಕೆ ಪಡೆಯಲು ಮಿಲಿಟರಿ ಒಪ್ಪಿಕೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾನವ ಹಕ್ಕುಗಳ (ಸಿರಿಯಾ) ಏಜೆನ್ಸಿ ವರದಿ ಮಾಡಿದೆ.
PC : PTI/AP
ಶುಕ್ರವಾರ ಸಿರಿಯಾದ ಮೂರನೇ ಅತೀ ದೊಡ್ಡ ನಗರ ಹೋಮ್ಸ್‍ನ ಹೊರವಲಯ ತಲುಪಿದ್ದ ಬಂಡುಕೋರ ಪಡೆ ಶನಿವಾರ ಮತ್ತಷ್ಟು ಮುನ್ನಡೆದಿದ್ದು ಸರಕಾರದ ಪಡೆಗಳಿಗೆ ಇಲ್ಲಿಯೂ ಹಿನ್ನಡೆಯಾಗಿದೆ. ದಮಾಸ್ಕಸ್ ಅನ್ನು ಅಸ್ಸಾದ್ ಅವರ ಭದ್ರಕೋಟೆ ಕರಾವಳಿ ನಗರಗಳು ಹಾಗೂ ರಶ್ಯದ ಮಿಲಿಟರಿ ನೆಲೆಗಳಿಗೆ ಸಂಪರ್ಕಿಸುವ ಹೋಮ್ಸ್ ಅತ್ಯಂತ ಆಯಕಟ್ಟಿನ ನಗರವಾಗಿದೆ. ಸಂಘರ್ಷ ಆರಂಭಗೊಂಡ ಒಂದು ವಾರದಲ್ಲೇ ಸಿರಿಯಾದ ಸೇನೆ ಪ್ರಮುಖ 4 ನಗರಗಳ ಮೇಲಿನ ನಿಯಂತ್ರಣ ಕಳೆದುಕೊಂಡಿದೆ.
ಸುಮಾರು 10,000 ಜನರಿರುವ ದರಾ ನಗರ ಅಸ್ಸಾದ್ ಆಡಳಿತದ ವಿರುದ್ಧದ ಚಳವಳಿಯ ಕೇಂದ್ರ ಬಿಂದುವಾಗಿ ಗಮನ ಸೆಳೆದಿತ್ತು. ದಾರಾ ನಗರಕ್ಕೆ ಪ್ರವೇಶಿಸುತ್ತಿದ್ದಂತೆಯೇ ಸಶಸ್ತ್ರ ಹೋರಾಟಗಾರರ ಗುಂಪಿನ ಜತೆ ಸ್ಥಳೀಯ ನಿವಾಸಿಗಳು ಸಂಭ್ರಮಾಚರಣೆ ನಡೆಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹೋಮ್ಸ್ ನಗರದಲ್ಲಿ ಹಿಂಸಾಚಾರದ ಭೀತಿಯಿಂದ ಸಾವಿರಾರು ಕುಟುಂಬಗಳು ಸರ್ಕಾರದ ನಿಯಂತ್ರಣದಲ್ಲಿರುವ ಲಟಾಕಿಯಾ, ಟಾರ್ಟಸ್ ನಗರದತ್ತ ಪಲಾಯನ ಮಾಡುತ್ತಿದ್ದಾರೆ. ದಕ್ಷಿಣ ದರಾ ಮತ್ತು ಸ್ವೀಡಾ ಪ್ರಾಂತಗಳಲ್ಲಿ ಸೇನೆಯನ್ನು ಮರು ನಿಯೋಜಿಸಲಾಗುತ್ತಿದೆ ಎಂದು ಸಿರಿಯಾದ ಸೇನೆ ಹೇಳಿದೆ. ಬಂಡುಕೋರರು ಈ ಪ್ರಾಂತದಲ್ಲಿನ ಸೇನೆಯ ಚೆಕ್‍ಪೋಸ್ಟ್ ಗಳ ಮೇಲೆ ದಾಳಿ ನಡೆಸಿದ ಬಳಿಕ ನಮ್ಮ ಸೇನೆಯನ್ನು ಮರು ನಿಯೋಜಿಸಲಾಗುತ್ತಿದ್ದು ಇಲ್ಲಿ ಭದ್ರತಾ ವಲಯವನ್ನು ನಿರ್ಮಿಸಲಾಗುವುದು ಎಂದು ಸೇನಾಪಡೆಯ ಕಮಾಂಡರ್ ರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಈ ಮಧ್ಯೆ, ಸಿರಿಯಾ ಬಿಕ್ಕಟ್ಟಿಗೆ ರಾಜಕೀಯ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಟರ್ಕಿ ವಿದೇಶಾಂಗ ಸಚಿವ ಹಕಾನ್ ಫಿದಾನ್ ಜತೆ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದಾರೆ. `ಸಿರಿಯಾದಲ್ಲಿ ಘರ್ಷಣೆ ತೀವ್ರಗೊಂಡಿರುವುದರಿಂದ ಭದ್ರತಾ ಪರಿಸ್ಥಿತಿ ಅಸ್ಥಿರ ಮತ್ತು ಅನಿರೀಕ್ಷಿತವಾಗಿದೆ. ಆದ್ದರಿಂದ ಸಿರಿಯಾದಲ್ಲಿರುವ ಅಮೆರಿಕ ಪ್ರಜೆಗಳು ತಕ್ಷಣ ಅಲ್ಲಿಂದ ನಿರ್ಗಮಿಸುವಂತೆ' ವಿದೇಶಾಂಗ ಇಲಾಖೆ ಸೂಚಿಸಿದೆ.
►ಯೋಧರನ್ನು ಹಿಂಪಡೆದ ಇರಾನ್
ಮಿತ್ರರಾಷ್ಟ್ರಗಳ ಬೆಂಬಲ ಕುಸಿದಿರುವುದು ಅಧ್ಯಕ್ಷ ಬಶರ್ ಅಸ್ಸಾದ್‍ರಿಗೆ ಮತ್ತೊಂದು ಹಿನ್ನಡೆಯಾಗಿದ್ದು ಇರಾನ್ ತನ್ನ ಸೇನಾ ಸಿಬ್ಬಂದಿಯನ್ನು ಸಿರಿಯಾದಿಂದ ಹಿಂದಕ್ಕೆ ಕರೆಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಅಸ್ಸಾದ್‍ರನ್ನು ಬೆಂಬಲಿಸುವ ರಶ್ಯವು ಹಮಾ, ಇದ್ಲಿಬ್ ಮತ್ತು ಅಲೆಪ್ಪೋದ ಮೇಲೆ ತೀವ್ರ ವೈಮಾನಿಕ ದಾಳಿ ಮುಂದುವರಿಸಿದ್ದು ನೂರಾರು ಬಂಡುಕೋರರನ್ನು ಹತ್ಯೆ ಮಾಡಿದೆ. ಆದರೆ ಉಕ್ರೇನ್ ಯುದ್ಧಕ್ಕೆ ಹೆಚ್ಚಿನ ಮಾನವ ಸಂಪನ್ಮೂಲ ಮತ್ತು ಶಸ್ತ್ರಾಸ್ತ್ರಗಳನ್ನು ಬಳಸುತ್ತಿರುವ ಕಾರಣ ರಶ್ಯದ ದಾಳಿ ಸೀಮಿತಗೊಂಡಿದೆ.
PC : PTI/AP