ರಾಜಧಾನಿ ಸುತ್ತುವರಿದ ಸಿರಿಯಾ ಬಂಡುಕೋರರು: ಸರ್ಕಾರ ನಿರಾಕರಣೆ
ದಮಾಸ್ಕಸ್: ಸಂಘರ್ಷ ಪೀಡಿತ ಸಿರಿಯಾದಲ್ಲಿ ಬಂಡುಕೋರರು ಮಿಂಚಿನ ಮುನ್ನಡೆ ಸಾಧಿಸಿದ್ದು, ಶನಿವಾರ ರಾಜಧಾನಿ ದಮಾಸ್ಕಸ್ ನಗರವನ್ನು ಸಮೀಪಿಸಿರುವುದಾಗಿ ಪ್ರಕಟಿಸಿದ್ದಾರೆ. ಇಡೀ ನಗರವನ್ನು ಸುತ್ತುವರಿದಿರುವುದಾಗಿ ಬಂಡುಕೋರರು ಘೋಷಿಸಿದ್ದಾರೆ. ಆದರೆ ನಗರದ ಸುತ್ತಮುತ್ತಲ ಪ್ರದೇಶಗಳಿಂದ ಸೇನೆಯನ್ನು ವಾಪಾಸು ಪಡೆಯಲಾಗಿದೆ ಎಂಬ ವರದಿಗಳನ್ನು ಬಶರ್ ಅಲ್ ಅಸಾದ್ ಸರ್ಕಾರ ನಿರಾಕರಿಸಿದೆ.
"ನಮ್ಮ ಪಡೆಗಳು ರಾಜಧಾನಿಯನ್ನು ಸುತ್ತುವರಿಯುವ ಅಂತಿಮ ಹಂತವನ್ನು ಅರಂಭಿಸಿದ್ದಾರೆ" ಎಂದು ಬಂಡುಕೋರರ ಗುಂಪಿನ ಕಮಾಂಡರ್ ಹಸನ್ ಅಬ್ದುಲ್ ಘನಿ ಹೇಳಿಕೆ ನೀಡಿದ್ದಾರೆ.
ಅಸಾದ್ ಸರ್ಕಾರದಿಂದ ಅಧಿಕಾರವನ್ನು ಪಡೆದುಕೊಳ್ಳಲು ಯೋಧರು ಸಜ್ಜಾಗಿದ್ದಾರೆ ಎಂದು ದಾಳಿಯ ಮುಂಚೂಣಿಯಲ್ಲಿರುವ ಹಯಾತ್ ತಹ್ರೀರ್ ಶಾಮ್ (ಎಚ್ ಟಿ ಎಸ್) ಪ್ರಕಟಿಸಿದೆ. ಸುಧೀರ್ಘ ಹೋರಾಟದಲ್ಲಿ ಬಂಡುಕೋರರು ಕಳೆದ ಒಂದು ವಾರದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದಾರೆ.
'ಡಮಾಸ್ಕಸ್ ನಿಮಗಾಗಿ ಕಾಯುತ್ತಿದೆ' ಎಂದು ಎಚ್ ಟಿ ಎಸ್ ನ ಅಹ್ಮದ್ ಅಲ್ ಶರಾ ಟೆಲಿಗ್ರಾಂನಲ್ಲಿ ಹೇಳಿಕೆ ನೀಡಿದ್ದಾರೆ. ಡಮಾಸ್ಕಸ್ ಸುತ್ತಮುತ್ತಲ ಎಲ್ಲ ಪ್ರದೇಶಗಳಲ್ಲಿ ಸೇನೆ ಅಸ್ತಿತ್ವ ಹೊಂದಿದೆ ಎಂದು ಸಿರಿಯಾದ ರಕ್ಷಣಾ ಸಚಿವಾಲಯ ಸಮರ್ಥಿಸಿಕೊಂಡಿದೆ. "ಸಶಸ್ತ್ರ ಪಡೆಗಳನ್ನು ಹಿಂದಕ್ಕೆ ಪಡೆಯಲಾಗಿದೆ ಎಂಬ ವರದಿಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ' ಎಂದು ಸ್ಪಷ್ಟಪಡಿಸಿದೆ.
ಸಿರಿಯಾ ಅಧ್ಯಕ್ಷ ಅಸಾದ್ ಅವರು ಡಮಾಸ್ಕಸ್ ತೊರೆದಿದ್ದಾರೆ ಎಂಬ ವರದಿಗಳನ್ನು ನಿರಾಕರಿಸಿರುವ ಅಧ್ಯಕ್ಷೀಯ ಕಾರ್ಯಾಲಯ, "ರಾಜಧಾನಿಯಿಂದ ಎಲ್ಲ ರಾಷ್ಟ್ರೀಯ ಮತ್ತು ಸಾಂವಿಧಾನಿಕ ಕರ್ತವ್ಯಗಳನ್ನು ನಿಭಾಯಿಸುತ್ತಿದೆ" ಎಂದು ಸ್ಪಷ್ಟಪಡಿಸಿದೆ.