ತಾಲಿಬಾನ್ ಅಮೆರಿಕಕ್ಕೆ ನೆರವಾಗುತ್ತಿದೆ: ಬೈಡನ್ ಹೇಳಿಕೆ

Update: 2023-07-01 18:02 GMT

Photo: PTI

ವಾಶಿಂಗ್ಟನ್: ಅಲ್ಖಾಯಿದಾದ ಬೆದರಿಕೆಯನ್ನು ಅಂತ್ಯಗೊಳಿಸುವಲ್ಲಿ ಅಮೆರಿಕವು ಅಫ್ಘಾನಿಸ್ತಾನದ ತಾಲಿಬಾನ್ನ ನೆರವು ಪಡೆಯುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

‘ಅಲ್ಖಾಯಿದಾದೊಂದಿಗೆ ತಾಲಿಬಾನ್ ಬಲಿಷ್ಠ ಮತ್ತು ನಿಕಟ ಸಂಬಂಧ ಹೊಂದಿದ್ದು ಅಲ್ಖಾಯಿದಾವು ಅಫ್ಘಾನ್ನ ನೆಲದಲ್ಲಿ ಕಾರ್ಯಾಚರಣೆ ಸಾಮರ್ಥ್ಯವನ್ನು ಮರುನಿರ್ಮಿಸುತ್ತಿದೆ’ ಎಂದು ಕಳೆದ ತಿಂಗಳು ಬಿಡುಗಡೆಗೊಂಡ ವಿಶ್ವಸಂಸ್ಥೆ ವರದಿ ಮಾಡಿತ್ತು. ಈಗ ಬೈಡನ್ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. 2021ರಲ್ಲಿ ಅಫ್ಘಾನ್ನಿಂದ ಅಮೆರಿಕದ ಸೇನೆಯನ್ನು ಹಿಂಪಡೆಯುವ ನಿರ್ಧಾರ ಬಹುದೊಡ್ಡ ಪ್ರಮಾದ ಎಂದು ಒಪ್ಪಿಕೊಳ್ಳುತ್ತೀರಾ ಎಂದು ಸುದ್ದಿಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿದ ಬೈಡನ್ ‘ಅಫ್ಘಾನ್ ಬಗ್ಗೆ ನಾನು ಹೇಳಿದ್ದು ನೆನಪಿದೆಯೇ ? ನಾವು ತಾಲಿಬಾನ್ನಿಂದ ಸಹಾಯ ಪಡೆಯುತ್ತೇವೆ ಎಂದು ಹೇಳಿದ್ದೆ. ಈಗ ಏನಾಗುತ್ತಿದೆ? ನಿಮ್ಮ ಪತ್ರಿಕೆಯ ವರದಿಯನ್ನು ಒಮ್ಮೆ ಓದಿನೋಡಿ. ನಾನು ಹೇಳಿದ್ದು ಸರಿಯಾಗಿದೆ’ ಎಂದು ಹೇಳಿದ್ದಾರೆ.

ಬೈಡನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ತಾಲಿಬಾನ್ ‘ಅಫ್ಘಾನ್ನಲ್ಲಿ ಸಶಸ್ತ್ರ ಹೋರಾಟಗಾರರ ತಂಡದ ಉಪಸ್ಥಿತಿಯಿಲ್ಲ ಎಂಬ ಅಮೆರಿಕ ಅಧ್ಯಕ್ಷರ ಹೇಳಿಕೆ ವಾಸ್ತವದ ಅಂಗೀಕಾರ ಎಂದು ಪರಿಗಣಿಸುತ್ತೇವೆ. ಅಫ್ಘಾನ್ನಲ್ಲಿ ಸಶಸ್ತ್ರ ಹೋರಾಟಗಾರರ ಪಡೆ ಕಾರ್ಯನಿರ್ವಹಿಸುತ್ತಿದೆ ಎಂಬ ವಿಶ್ವಸಂಸ್ಥೆಯ ಹೇಳಿಕೆಗೆ ಇದು ವಿರುದ್ಧವಾಗಿದೆ’ ಎಂದಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News