ರಫಾದ ಮಧ್ಯಭಾಗ ತಲುಪಿದ ಇಸ್ರೇಲ್ ಟ್ಯಾಂಕ್‍ಗಳು
ಗಾಝಾ: ದಕ್ಷಿಣ ಗಾಝಾದ ರಫಾ ನಗರದ ಮೇಲೆ ಮೂರು ವಾರಗಳ ಭೂದಾಳಿಯ ಬಳಿಕ ಪ್ರಥಮ ಬಾರಿಗೆ ಇಸ್ರೇಲ್ ಟ್ಯಾಂಕ್‍ಗಳು ರಫಾದ ಮಧ್ಯಭಾಗಕ್ಕೆ ತಲುಪಿವೆ ಎಂದು ವರದಿಯಾಗಿದೆ.
ಮಧ್ಯ ರಫಾದ ಅಲ್-ಅವ್ದಾ ಮಸೀದಿಯ ಬಳಿ ಇಸ್ರೇಲ್ ಟ್ಯಾಂಕ್‍ಗಳು ಕಂಡು ಬಂದಿವೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಪಶ್ಚಿಮ ರಫಾದ ಝುರುಬ್ ಬೆಟ್ಟದ ತುದಿಯಲ್ಲಿ ಇಸ್ರೇಲ್ ಟ್ಯಾಂಕ್‍ಗಳನ್ನು ನಿಯೋಜಿಸಲಾಗಿದೆ. ಝುರುಬ್ ಪ್ರದೇಶದಲ್ಲಿ ಮಂಗಳವಾರ ಇಸ್ರೇಲ್ ಪಡೆ ಮತ್ತು ಹಮಾಸ್ ನಡುವೆ ಭೀಕರ ಗುಂಡಿನ ಘರ್ಷಣೆ ನಡೆಯುತ್ತಿದೆ. ರಿಮೋಟ್ ಚಾಲಿತ ಶಸ್ತ್ರಸಜ್ಜಿತ ವಾಹನಗಳನ್ನು ಇಸ್ರೇಲ್ ಪಡೆ ಝುರುಬ್ ಪ್ರದೇಶಕ್ಕೆ ರವಾನಿಸಿದೆ ಎಂದು ವರದಿ ಹೇಳಿದೆ.
ಅಧ್ಯಕ್ಷನಾಗಿ ಆಯ್ಕೆಗೊಂಡರೆ ಫೆಲೆಸ್ತೀನ್ ಪರ ಪ್ರತಿಭಟನಾಕಾರರ ಗಡೀಪಾರು: ಡೊನಾಲ್ಡ್ ಟ್ರಂಪ್ (ವಾ, ಫೇ)
ವಾಷಿಂಗ್ಟನ್: ಎರಡನೇ ಅವಧಿಗೆ ಅಧ್ಯಕ್ಷನಾಗಿ ಆಯ್ಕೆಗೊಂಡರೆ ಫೆಲೆಸ್ತೀನ್ ಪರ ಪ್ರತಿಭಟನಾಕಾರರನ್ನು ಗಡೀಪಾರು ಮಾಡುವುದಾಗಿ ಮಾಜಿ ಅಧ್ಯಕ್ಷ, ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನವೆಂಬರ್ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ. ಇತ್ತೀಚೆಗೆ ನ್ಯೂಯಾರ್ಕ್‍ನಲ್ಲಿ ನಡೆದಿದ್ದ ಪಕ್ಷದ ಪ್ರಮುಖ ದೇಣಿಗೆದಾರರ ಸಭೆಯಲ್ಲಿ ಮಾತನಾಡಿದ ಟ್ರಂಪ್ ಈ ಹೇಳಿಕೆ ನೀಡಿರುವುದಾಗಿ `ವಾಷಿಂಗ್ಟನ್ ಪೋಸ್ಟ್' ವರದಿ ಮಾಡಿದೆ.
`ಅಧ್ಯಕ್ಷನಾಗಿ ಆಯ್ಕೆಗೊಂಡರೆ ನಾನು ಮಾಡುವ ಒಂದು ಕೆಲಸವೆಂದರೆ ಫೆಲೆಸ್ತೀನ್ ಪರ ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳನ್ನು ದೇಶದಿಂದ ಹೊರಗೆಸೆಯುವುದು. ಇಲ್ಲಿ ಹಲವು ವಿದೇಶೀ ವಿದ್ಯಾರ್ಥಿಗಳಿರುವುದು ನಿಮಗೂ ಗೊತ್ತು. ನಾನು ಈ ಕ್ರಮ ಕೈಗೊಂಡಿರುವುದನ್ನು ಕೇಳಿದೊಡನೆ ಅವರು ತಮ್ಮ ವರ್ತನೆಯನ್ನು ಸುಧಾರಿಸಿಕೊಳ್ಳುತ್ತಾರೆ' ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ. `ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಹಲವು ವಿದ್ಯಾರ್ಥಿಗಳು ಹಾಗೂ ಪ್ರೊಫೆಸರ್‍ಗಳು ಮುಂದೊಂದು ದಿನ ದೇಶದಲ್ಲಿ ಅಧಿಕಾರದ ಸ್ಥಾನ ಪಡೆಯಬಹುದು' ಎಂದು ಕಾರ್ಯಕ್ರಮದ ಸಂದರ್ಭ ಓರ್ವ ದೇಣಿಗೆದಾರರು ಕಳವಳ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಟ್ರಂಪ್ `ಪ್ರತಿಭಟನೆಗಳು ತೀವ್ರವಾದಿಗಳ ಪ್ರದರ್ಶನವಾಗಿದ್ದು ಅದನ್ನು ಬಗ್ಗುಬಡಿಯುವುದಾಗಿ' ವಾಗ್ದಾನ ಮಾಡಿದರು ಮತ್ತು ಕೊಲಂಬಿಯಾ ವಿವಿಯಲ್ಲಿ ನಡೆದ ಪ್ರತಿಭಟನೆಯನ್ನು ಚದುರಿಸಲು ನ್ಯೂಯಾರ್ಕ್ ಪೊಲೀಸರು ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದರು ಎಂದು ವರದಿ ಹೇಳಿದೆ.