ಅಮೆರಿಕದಲ್ಲಿ ತೆಲಂಗಾಣ ವಿದ್ಯಾರ್ಥಿಗೆ ಗುಂಡಿಟ್ಟು ಹತ್ಯೆ: ದರೋಡೆ ಪ್ರಯತ್ನದ ವೇಳೆ ಘಟನೆ ನಡೆದಿರುವ ಶಂಕೆ

Photo : indianexpress.com
ಹೈದರಾಬಾದ್: ತೆಲಂಗಾಣದ 27 ವರ್ಷದ ವಿದ್ಯಾರ್ಥಿ ಪ್ರವೀಣ್ ಕುಮಾರ್ ಗಾಂಪಾರನ್ನು ಬುಧವಾರ ಅಮೆರಿಕದ ವಿಸ್ಕಾನ್ಸಿನ್ ನಲ್ಲಿ ಗುಂಡಿಟ್ಟು ಹತ್ಯೆಗೈಯ್ಯಲಾಗಿದೆ. ದರೋಡೆ ಪ್ರಯತ್ನದ ವೇಳೆ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪ್ರವೀಣ್ ಗಾಂಪಾಗೆ ಮಾಡಲಾಗಿದ್ದ ಕರೆಗೆ ಅಪರಿಚಿತ ವ್ಯಕ್ತಿಯೊಬ್ಬರು ಉತ್ತರಿಸಿದ್ದರಿಂದ ಕುಟುಂಬದ ಸದಸ್ಯರು ಆತಂಕಕ್ಕೊಳಗಾಗಿದ್ದಾರೆ. ನಂತರ, ಪ್ರವೀಣ್ ಗಾಂಪಾರ ಸ್ನೇಹಿತರು ಹಾಗೂ ಅಮೆರಿಕ ಪೊಲೀಸರು ನೀಡಿದ ಮಾಹಿತಿಯ ಬಳಿಕವಷ್ಟೆ ತಮ್ಮ ಪುತ್ರನ ಹತ್ಯೆಯಾಗಿರುವುದು ಆತನ ಪೋಷಕರಿಗೆ ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪ್ರವೀಣ್ ಗಾಂಪಾರ ತಂದೆ ರಾಘವುಲು, “ಬುಧವಾರ ಬೆಳಗ್ಗೆ ನನ್ನ ಪುತ್ರನಿಂದ ವಾಟ್ಸ್ ಆ್ಯಪ್ ಕರೆ ಸ್ವೀಕರಿಸಿದ್ದೆ. ಆದರೆ, ಅದು ಮಿಸ್ಡ್ ಕಾಲ್ ಆಗಿತ್ತು. ಹೀಗಾಗಿ ನಾನು ಮರಳಿ ಕರೆ ಮಾಡಿದಾಗ, ಅಪರಿಚತ ವ್ಯಕ್ತಿಯೊಬ್ಬ ಆ ಕರೆಯನ್ನು ಸ್ವೀಕರಿಸಿ, ನಿಮ್ಮ ಪುತ್ರನ ಫೋನ್ ಪತ್ತೆಯಾಗಿದೆ ಎಂದು ತಿಳಿಸಿದ. ಇದರಿಂದ ಏನೋ ಆನಾಹುತವಾಗಿರಬಹುದು ಎಂಬ ಆತಂಕಕ್ಕೊಳಗಾದೆವು. ಕೊನೆಗೆ ತಮ್ಮ ಆತಂಕವೇ ದೃಢವಾಯಿತು” ಎಂದು ಅಳಲು ತೋಡಿಕೊಂಡಿದ್ದಾರೆ.
ಗಾಂಪಾ ದೇಹದೊಳಕ್ಕೆ ಗುಂಡುಗಳು ಹೊಕ್ಕಿದ್ದವು ಎಂದು ಆತನ ಕೆಲವು ಸ್ನೇಹಿತರು ತಿಳಿಸಿದ್ದಾರೆ ಎಂದು ಪ್ರವೀಣ್ ಗಾಂಪಾರ ಸೋದರ ಸಂಬಂಧಿ ಅರುಣ್ ತಿಳಿಸಿದ್ದಾರೆ. ಇನ್ನೂ ಕೆಲವರು ಆತನನ್ನು ಆಂಗಡಿಯೊಂದರಲ್ಲಿ ಗುಂಡಿಟ್ಟು ಹತ್ಯೆಗೈಯ್ಯಲಾಯಿತು ಎಂದು ಹೇಳಿದ್ದು, ನಿಖರವಾಗಿ ಏನಾಗಿದೆ ಎಂಬುದು ಪ್ರವೀಣ್ ಗಾಂಪಾರ ಪೋಷಕರಿಗೆ ಇನ್ನಷ್ಟೇ ತಿಳಿದು ಬರಬೇಕಿದೆ.
2023ರಲ್ಲಿ ವಿಲ್ಕಾನ್ಸಿನ್-ಮಿಲ್ವೌಕೀ ವಿಶ್ವವಿದ್ಯಾಲಯದಲ್ಲಿ ದತ್ತಾಂಶ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ನಡೆಸಲು ಪ್ರವೀಣ್ ಗಾಂಪಾ ಅಮೆರಿಕಕ್ಕೆ ತೆರಳಿದ್ದರು. ಘಟನೆ ನಡೆದ ವೇಳೆ ಆತ ಸ್ಥಳೀಯ ಅಂಗಡಿಯೊಂದರಲ್ಲಿ ಅರೆಕಾಲಿಕ ಉದ್ಯೋಗ ನಿರ್ವಹಿಸುತ್ತಿದ್ದರು ಎಂದು ವರದಿಯಾಗಿದೆ.
ಪ್ರವೀಣ್ ಗಾಂಪಾರ ಸಾವಿಗೆ ಚಿಕಾಗೊದಲ್ಲಿನ ಭಾರತೀಯ ರಾಯಭಾರ ಕಚೇರಿ ಸಂತಾಪ ವ್ಯಕ್ತಪಡಿಸಿದೆ.