ಯುದ್ಧ ಪರಿಸ್ಥಿತಿ ತೀವ್ರ: ಯೆಮನ್ ಹೌದಿಗಳ ಮೇಲೂ ಇಸ್ರೇಲ್ ದಾಳಿ
ಬೈರೂತ್: ನಗರದ ಅಪಾರ್ಟ್‍ಮೆಂಟ್ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ್ದು, ಇದರಿಂದಾಗಿ ಈ ಭಾಗದಲ್ಲಿ ಉದ್ವಿಗ್ನತೆ ಹೊಸ ಮಟ್ಟವನ್ನು ತಲುಪಿದೆ. ಬೈರೂತ್ ನಗರದ ವ್ಯಾಪ್ತಿಯಲ್ಲಿ ನಡೆದ ಮೊದಲ ದಾಳಿ ಇದಾಗಿದ್ದು, ಇಸ್ರೇಲ್ ಹಾಗೂ ಇರಾನ್ ಮಿತ್ರರಾಷ್ಟ್ರಗಳ ನಡುವಿನ ವೈಷಮ್ಯ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.
ಕೋಲಾ ಜಿಲ್ಲೆಯ ಕಟ್ಟಡದ ಮೇಲಿನ ಮಹಡಿಯನ್ನು ಗುರಿ ಮಾಡಿದ್ದ ಈ ದಾಳಿಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ ಎಂದು ಭದ್ರತಾ ಪಡೆಗಳ ಹೇಳಿಕೆಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಲೆಬನಾನ್‍ನಲ್ಲಿ ಹಿಝ್ಬುಲ್ಲಾ ತಾಣಗಳನ್ನು ಗುರಿಮಾಡಿ ನಿರಂತರ ದಾಳಿ ನಡೆಸುತ್ತಿರುವ ಇಸ್ರೇಲ್, ಯೆಮನ್‍ನಲ್ಲಿ ಹೌದಿಗಳ ಮೇಲೂ ದಾಳಿ ನಡೆಸುತ್ತಿದೆ. ಇದು ಈ ಭಾಗದಲ್ಲಿ ಗಡಿ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದ್ದು, ಇರಾನ್ ಹಾಗೂ ಅಮೆರಿಕದಂತಹ ದೇಶಗಳು ನೇರವಾಗಿ ಸಂಘರ್ಷಕ್ಕೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾನುವಾರ ಇಸ್ರೇಲ್, ಯೆಮನ್‍ನ ಎರಡು ಹೌದಿ ತಾಣಗಳ ಮೇಲೆ ಹಾಗೂ ಲೆಬನಾನ್‍ನಲ್ಲಿ ಹಿಝ್ಬುಲ್ಲಾದ ಹಲವು ಕೇಂದ್ರಗಳ ಮೇಲೆ ದಾಳಿ ನಡೆಸಿ, ಹಿಝ್ಬುಲ್ಲಾ ನಾಯಕನನ್ನು ಹತ್ಯೆ ಮಾಡಿದೆ. ಯೆಮನ್‍ನ ಹೊದೇಹ್ ಬಂದರು ಮತ್ತು ವಿದ್ಯುತ್ ಉತ್ಪಾದನಾ ಘಟಕದ ಮೇಲೂ ದಾಳಿ ನಡೆದಿದೆ. ಬೆನ್ ಗುರಿಯನ್ ವಿಮಾನ ನಿಲ್ದಾಣದ ಮೇಲೆ ಹೌದಿ ನಡೆಸಿದ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಈ ಕ್ರಮ ಕೈಗೊಂಡಿದೆ. ಹೌದಿಗಳ ಪ್ರಕಾರ ಈ ದಾಳಿಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, 40 ಜನ ಗಾಯಗೊಂಡಿದ್ದಾರೆ.