ಪುಟಿನ್ ಅವರ ಕ್ರೌರ್ಯವನ್ನು ಇದು ತೋರಿಸಿದೆ: ಅಮೆರಿಕ ಖಂಡನೆ
ವಾಷಿಂಗ್ಟನ್: ದೀರ್ಘಾವಧಿಯಿಂದ ರಶ್ಯದ ಜೈಲಿನಲ್ಲಿ ಬಂಧನದಲ್ಲಿದ್ದ ಅಲೆಕ್ಸಿ ನವಾಲ್ನಿ ಜೈಲಿನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಬಗ್ಗೆ ಅಂತರಾಷ್ಟ್ರೀಯ ಸಮುದಾಯದಿಂದ ವ್ಯಾಪಕ ಖಂಡನೆ, ವಿರೋಧ ವ್ಯಕ್ತವಾಗಿದೆ.
ರಶ್ಯ ಅಧ್ಯಕ್ಷ ಪುಟಿನ್ ಅವರ ಕ್ರೂರತೆಗೆ ಇದು ಮತ್ತಷ್ಟು ಪುರಾವೆಯಾಗಿದೆ ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಖಂಡಿಸಿದ್ದಾರೆ. ನವಾಲ್ನಿ ಸಾವಿನ ಸುದ್ಧಿಯಿಂದ ತೀವ್ರ ವಿಚಲಿತಗೊಂಡಿದ್ದು ಅತೀವ ದುಃಖವಾಗಿದೆ. ತನ್ನದೇ ದೇಶದ ಜನರ ಭಿನ್ನಾಭಿಪ್ರಾಯವನ್ನು ಎದುರಿಸಲು ಪುಟಿನ್ ಹೆದರುತ್ತಾರೆ. ಪುಟಿನ್ ನಿರಂಕುಶ ಅಧಿಕಾರದ ವಿರುದ್ಧ ಧ್ವನಿ ಎತ್ತುವವರಿಗೆ ರಕ್ಷಣೆ ಮತ್ತು ಭದ್ರತೆ ಖಾತರಿಪಡಿಸಲು ನಾವೆಲ್ಲಾ ಒಂದಾಗಬೇಕಿದೆ ಎಂದು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್‍ಡೆರ್ ಲೆಯೆನ್ ಪ್ರತಿಕ್ರಿಯಿಸಿದ್ದಾರೆ.
ವಿರೋಧಿಗಳನ್ನು ಹತ್ತಿಕ್ಕುವ ಪುಟಿನ್ ಆಡಳಿತ ನೀತಿಯನ್ನು ವಿರೋಧಿಸಿದ್ದ ನವಾಲ್ನಿ ಅದಕ್ಕಾಗಿ ತಮ್ಮ ಪ್ರಾಣ ತೆತ್ತಿದ್ದಾರೆ. ಇದು ಪುಟಿನ್ ಅವರ ಮತ್ತೊಂದು ಮುಖದ ಅನಾವರಣವಾಗಿದೆ ಎಂದು ಫ್ರಾನ್ಸ್ ಸರಕಾರ ಖಂಡಿಸಿದೆ. ನವಾಲ್ನಿ ಅವರ ಸಾವಿಗೆ ಪುಟಿನ್ ಅವರನ್ನು ಹೊಣೆಗಾರರನ್ನಾಗಿಸಬೇಕು. ಭ್ರಷ್ಟಾಚಾರದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ್ದ ನವಾಲ್ನಿಯ ಧ್ವನಿಯನ್ನು ಜೈಲಿನಲ್ಲೇ ಹತ್ತಿಕ್ಕಲಾಗಿದೆ' ಎಂದು ಬ್ರಿಟನ್ ವಿದೇಶಾಂಗ ಸಚಿವ ಡೇವಿಡ್ ಕ್ಯಾಮರಾನ್ ಆಗ್ರಹಿಸಿದ್ದಾರೆ. ಜರ್ಮನಿ, ಪೋಲ್ಯಾಂಡ್, ಉಕ್ರೇನ್, ಸ್ಪೇನ್ ಮುಂತಾದ ದೇಶಗಳೂ ನವಾಲ್ನಿ ಸಾವಿಗೆ ಆಘಾತ ಸೂಚಿಸಿವೆ.