ಇಸ್ರೇಲ್ ದಾಳಿ ಖಂಡಿಸಿ ಕೋಲ್ಕತಾದಲ್ಲಿ ರ‍್ಯಾಲಿ, ಸಾವಿರಾರು ಜನರು ಭಾಗಿ

Update: 2023-11-09 17:11 GMT

Photo- PTI

ಕೋಲ್ಕತಾ: ಫೆಲೆಸ್ತೀನ್ ಮೇಲೆ ಇಸ್ರೇಲ್ ದಾಳಿಯನ್ನು ಖಂಡಿಸಿ ಬುಧವಾರ ಇಲ್ಲಿ ನಡೆದ ಸಾಮ್ರಾಜ್ಯಶಾಹಿ ವಿರೋಧಿ ಜಾಥಾದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.

ಕಾರ್ಮಿಕರು,ಶಿಕ್ಷಕರು,ವಿದ್ಯಾರ್ಥಿಗಳು ಮತ್ತು ಶಾಂತಿ ಕಾರ್ಯಕರ್ತರು ಪಾಲ್ಗೊಂಡಿದ್ದ ರ‍್ಯಾಲಿಯಲ್ಲಿ ಗಾಝಾ ಪಟ್ಟಿಯ ಸ್ಥಿತಿಯನ್ನು ಬಿಂಬಿಸುವ ಚಿತ್ರಗಳೊಂದಿಗೆ ‘ಸೇ ನೋ ಟು ವಾರ್ ’ಎಂಬ ಭಿತ್ತಿಪತ್ರಗಳು ರಾರಾಜಿಸಿದ್ದವು. ಇಸ್ರೇಲ್ ವಿರುದ್ಧ ಘೋಷಣೆಗಳೂ ಮೊಳಗುತ್ತಿದ್ದವು.

ಜಾಥಾದ ಬಳಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಎಡರಂಗದ ಅಧ್ಯಕ್ಷ ಬಿಮನ್ ಬಸು ಅವರು, ಸಾಮ್ರಾಜ್ಯಶಾಹಿ ಅಮೆರಿಕದ ಬೆಂಬಲದೊಂದಿಗೆ ಇಸ್ರೇಲ್ ಫೆಲೆಸ್ತೀನ್‌ನಲ್ಲಿ ನರಮೇಧವನ್ನು ಮುಂದುವರಿಸುತ್ತಿದೆ. ಗಾಝಾ ಪಟ್ಟಿಯೊಂದರಲ್ಲೇ ಈವರೆಗೆ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 10,000ಕ್ಕೂ ಅಧಿಕ ಸಾವುಗಳು ಸಂಭವಿಸಿವೆ. ಲಂಡನ್ ಮತ್ತು ಪ್ಯಾರಿಸ್‌ನಂತಹ ಪಾಶ್ಚಾತ್ಯ ನಗರಗಳಲ್ಲಿ ಇಸ್ರೇಲ್‌ನ ಆಕ್ರಮಣದ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಈ ನರಮೇಧದ ವಿರುದ್ಧ ಭಾರತೀಯರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟಿಸಬೇಕಿದೆ ಎಂದು ಹೇಳಿದರು. ಮುಂದಿನ ಎರಡು ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇದೇ ರೀತಿಯ ಜಾಥಾಗಳು ನಡೆಯಲಿವೆ ಎಂದು ಅವರು ತಿಳಿಸಿದರು.

ಜಗತ್ತಿನಾದ್ಯಂತ ಯಾವುದೇ ಸಾಮ್ರಾಜ್ಯಶಾಹಿ ಮಧ್ಯಪ್ರವೇಶದ ವಿರುದ್ಧ ಕೋಲ್ಕತಾದ ಜನರು ನಿರ್ವಹಿಸಿದ್ದ ಐತಿಹಾಸಿಕ ಸಾಮ್ರಾಜ್ಯಶಾಹಿ ವಿರೋಧಿ ಪಾತ್ರವನ್ನು ತನ್ನ ಭಾಷಣದಲ್ಲಿ ಒತ್ತಿ ಹೇಳಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ಡಿ.ಸಲೀಂ ಅವರು, ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ಕೋಲ್ಕತಾ ನಿರ್ವಹಿಸಿದ್ದ ಪಾತ್ರವನ್ನು ಜನರಿಗೆ ನೆನಪಿಸಿದರು. ಫೆಲೆಸ್ತೀನ್ ವಿಮೋಚನಾ ಹೋರಾಟವು ಭಾರತದ ಸ್ವಾತಂತ್ರ್ಯ ಆಂದೋಲನದೊಂದಿಗೆ ಗುರುತಿಸಿಕೊಂಡಿದ್ದು, ಮಹಾತ್ಮಾ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರೂ ಫೆಲೆಸ್ತೀನಿಗಳನ್ನು ಬೆಂಬಲಿಸಿದ್ದರು ಮತ್ತು ಇಸ್ರೇಲ್ ಆಕ್ರಮಣವನ್ನು ವಿರೋಧಿಸಿದ್ದರು ಎಂದು ಹೇಳಿದರು.

ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಬ್ರಿಟಿಷ್‌ರನ್ನು ವಿರೋಧಿಸದ ಆರೆಸ್ಸೆಸ್‌ನ ಪಾತ್ರವನ್ನು ಖಂಡಿಸಿದ ಅವರು, ಹೀಗಾಗಿಯೇ ಅದು ಈ ಯುದ್ಧದಲ್ಲಿ ಇಸ್ರೇಲ್‌ನ್ನು ಬೆಂಬಲಿಸುತ್ತಿದೆ. ಇದೇ ಕಾರಣದಿಂದಾಗಿ ಇಸ್ರೇಲ್‌ನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದ ಮೇಲೆ ಮತದಾನಕ್ಕೆ ಭಾರತವು ಗೈರುಹಾಜರಾಗಿತ್ತು ಎಂದರು.

ಇಸ್ರೇಲ್‌ನ ಆಕ್ರಮಣವನ್ನು ವಿಶ್ವಾದ್ಯಂತದ ಜನರು ಖಂಡಿಸುತ್ತಿದ್ದರೆ ಭಾರತೀಯ ಹಿಂದುತ್ವ ಪ್ರತಿಪಾದಕರು ಝಿಯೊನಿಸ್ಟ್‌ಗಳು ಮತ್ತು ಹಿಂದುತ್ವದ ನಡುವೆ ಸಾಮ್ಯತೆಗಳನ್ನು ಕಂಡುಕೊಳ್ಳುತ್ತಿದ್ದಾರೆ ಮತ್ತು ಇಸ್ರೇಲ್‌ನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದ ಸಲೀಂ ,ಪ.ಬಂಗಾಳದ ಆಡಳಿತ ಪಕ್ಷ ಟಿಎಂಸಿ ಈ ವಿಷಯದಲ್ಲಿ ಗಾಢಮೌನವನ್ನು ವಹಿಸಿದೆ ಎಂದು ಟೀಕಿಸಿದರು.

ಎಡರಂಗದ ಹಲವಾರು ನಾಯಕರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News