ಗಾಝಾದಲ್ಲಿ ಮಾನವೀಯ ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಇಸ್ರೇಲ್‍ಗೆ ಐಸಿಜೆ ಸೂಚನೆ

Update: 2024-03-29 17:56 GMT

Photo: PTI

ಹೇಗ್: ಗಾಝಾದಲ್ಲಿ ಮಾನವೀಯ ಪರಿಸ್ಥಿತಿಯನ್ನು ಸುಧಾರಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಯುದ್ಧದಿಂದ ಜರ್ಝರಿತಗೊಂಡಿರುವ ಭೂಪ್ರದೇಶಕ್ಕೆ ಆಹಾರ, ನೀರು, ಇಂಧನ ಮತ್ತು ಇತರ ಅಗತ್ಯದ ನೆರವು ಒದಗಿಸಲು ಹೆಚ್ಚಿನ ಗಡಿದಾಟು ತೆರೆಯುವಂತೆ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯ ಇಸ್ರೇಲ್‍ಗೆ ಆದೇಶ ನೀಡಿದೆ.

ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯ ಬಳಿಕ ಗಾಝಾದಲ್ಲಿ ಇಸ್ರೇಲ್ ಆರಂಭಿಸಿದ ಮಿಲಿಟರಿ ಕಾರ್ಯಾಚರಣೆಯಲ್ಲಿ ಇಸ್ರೇಲ್ ನರಮೇಧದ ಕೃತ್ಯ ನಡೆಸಿದೆ ಎಂದು ಆರೋಪಿಸಿ ದಕ್ಷಿಣ ಆಫ್ರಿಕಾ ಅಂತರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ದಲ್ಲಿ ದಾಖಲಿಸಿರುವ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಎರಡು ಹೊಸ ತಾತ್ಕಾಲಿಕ ಕ್ರಮಗಳನ್ನು ಜಾರಿಗೊಳಿಸಿದೆ. ಆದರೆ ಗಾಝಾದಲ್ಲಿ ಕದನ ವಿರಾಮ ಜಾರಿ ಸೇರಿದಂತೆ ಹೊಸ ಕ್ರಮಗಳನ್ನು ಜಾರಿಗೊಳಿಸುವಂತೆ ದಕ್ಷಿಣ ಆಫ್ರಿಕಾ ಆಗ್ರಹಿಸಿತ್ತು.

ಕಾನೂನುಬದ್ಧವಾಗಿ ಬಂಧಿಸುವ ಆದೇಶದಲ್ಲಿ `ಆಹಾರ, ನೀರು, ಇಂಧನ ಮತ್ತು ವೈದ್ಯಕೀಯ ಸರಬರಾಜು ಸೇರಿದಂತೆ ಮೂಲಭೂತ ಸೇವೆಗಳು ಮತ್ತು ಮಾನವೀಯ ನೆರವಿನ ಅಡೆತಡೆಯಿಲ್ಲದ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ತಡವಿಲ್ಲದೆ ಕ್ರಮಗಳನ್ನು ಕೈಗೊಳ್ಳುವಂತೆ' ನ್ಯಾಯಾಲಯವು ಇಸ್ರೇಲ್‍ಗೆ ಆದೇಶಿಸಿದೆ.

ಮಾನವೀಯ ನೆರವು ವಿತರಣೆಯನ್ನು ತಡೆಯುವುದು ಸೇರಿದಂತೆ ʼನರಹತ್ಯೆಯ ಅಪರಾಧ ತಡೆಗಟ್ಟುವುದು ಮತ್ತು ಶಿಕ್ಷೆಯ ಸಮಾವೇಶ'ದ ಅಡಿಯಲ್ಲಿ ಫೆಲೆಸ್ತೀನೀಯಾದ ಹಕ್ಕುಗಳಿಗೆ ಹಾನಿ ಮಾಡಬಹುದಾದ ಕ್ರಮಗಳನ್ನು ತನ್ನ ಸೇನೆ ತೆಗೆದುಕೊಳ್ಳುವುದಿಲ್ಲ ಎಂದು ತಕ್ಷಣವೇ ಖಚಿತಪಡಿಸಿಕೊಳ್ಳುವಂತೆ ಇಸ್ರೇಲ್‍ಗೆ ಆದೇಶ ನೀಡಿದೆ. ಆದೇಶ ಜಾರಿಗೊಳಿಸಿದ ಬಗ್ಗೆ 1 ತಿಂಗಳಲ್ಲಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.

ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್‍ನ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ ಕನಿಷ್ಟ 1,200 ಮಂದಿ ಮೃತಪಟ್ಟಿದ್ದರು ಮತ್ತು ಸುಮಾರು 250 ಮಂದಿಯನ್ನು ಹಮಾಸ್ ಒತ್ತೆಯಾಳಾಗಿ ಇರಿಸಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸಿದ ಕಾರ್ಯಾಚರಣೆಯಲ್ಲಿ 32,000ಕ್ಕೂ ಅಧಿಕ ಫೆಲೆಸ್ತೀನೀಯರು ಮೃತಪಟ್ಟಿದ್ದು ಗಾಝಾದ ಜನಸಂಖ್ಯೆಯ 80%ಕ್ಕೂ ಅಧಿಕ ಮಂದಿ ಸ್ಥಳಾಂತರಗೊಂಡಿದ್ದಾರೆ. ವ್ಯಾಪಕ ನಾಶ-ನಷ್ಟ ಸಂಭವಿಸಿದೆ ಎಂದು ಗಾಝಾದ ಆರೋಗ್ಯ ಇಲಾಖೆ ವರದಿ ಮಾಡಿದೆ. ಗಾಝಾದ ಸಂಪೂರ್ಣ ಜನಸಂಖ್ಯೆ ಸಾಕಷ್ಟು ಆಹಾರ ಪಡೆಯಲು ಹೆಣಗಾಡುತ್ತಿದೆ ಮತ್ತು ವಿಶೇಷವಾಗಿ ಉತ್ತರ ಗಾಝಾದಲ್ಲಿ ಸಾವಿರಾರು ಜನರು ಬರಗಾಲದ ಅಂಚಿನಲ್ಲಿದ್ದಾರೆ ಎಂದು ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ನೆರವು ಏಜೆನ್ಸಿಗಳು ಎಚ್ಚರಿಕೆ ನೀಡಿವೆ.

"ಫೆಲೆಸ್ತೀನೀಯರ ಅಸ್ತಿತ್ವದ ಹಕ್ಕನ್ನು ರಕ್ಷಿಸುವ ಅಗತ್ಯವಿದೆ"

ಐಸಿಜೆಯ ಆದೇಶ ಅತ್ಯಂತ ಮಹತ್ವದ್ದಾಗಿದೆ ಎಂದು ದಕ್ಷಿಣ ಆಫ್ರಿಕಾ ಪ್ರತಿಕ್ರಿಯಿಸಿದೆ. `ಫೆಲೆಸ್ತೀನೀಯರ ಸಾವುಗಳು ಕೇವಲ ಬಾಂಬ್ ದಾಳಿ ಮತ್ತು ನೆಲದ ದಾಳಿಯಿಂದ ಉಂಟಾಗಿಲ್ಲ. ಜತೆಗೆ ರೋಗ ಮತ್ತು ಆಹಾರದ ಕೊರತೆಯಿಂದಲೂ ಸಂಭವಿಸಿದೆ ಎಂಬ ಅಂಶವು ಫೆಲೆಸ್ತೀನೀಯರ ಅಸ್ತಿತ್ವದ ಹಕ್ಕನ್ನು ರಕ್ಷಿಸುವ ಅಗತ್ಯವನ್ನು ಸೂಚಿಸುತ್ತದೆ' ಎಂದು ದಕ್ಷಿಣ ಆಫ್ರಿಕಾ ಹೇಳಿದೆ.

ಈ ಮಹತ್ವದ ಆದೇಶ ಕೇವಲ ಕಾಗದದಲ್ಲಿ ಮಾತ್ರ ಉಳಿಯಬಾರದು. ಇದನ್ನು ತಕ್ಷಣ ಅಂತರಾಷ್ಟ್ರೀಯ ಸಮುದಾಯ ಜಾರಿಗೊಳಿಸಬೇಕು ಎಂದು ಹಮಾಸ್ ಆಗ್ರಹಿಸಿದೆ.

ಈ ಪ್ರಕರಣವು ಇಸ್ರೇಲ್ ಅನ್ನು ನರಮೇಧಕ್ಕೆ ಹೊಣೆಗಾರನನ್ನಾಗಿ ಮಾಡುವ ಜಾಗತಿಕ ಪ್ರಯತ್ನದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಫೆಲೆಸ್ತೀನಿಯನ್ ವಿದೇಶಾಂಗ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News