ಸಿರಿಯಾದ ಅದ್ರಾ ಜೈಲಿನಲ್ಲಿ ಅಸ್ಸಾದ್ ವಿರೋಧಿಗಳಿಗೆ ಚಿತ್ರಹಿಂಸೆ : ಅಮೆರಿಕ ಆರೋಪ
ವಾಷಿಂಗ್ಟನ್ : ಈಗ ಪದಚ್ಯುತಗೊಂಡಿರುವ ಸಿರಿಯಾ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರ ಸರಕಾರದ ವಿರೋಧಿಗಳಿಗೆ ಸಿರಿಯಾದ ಕುಖ್ಯಾತ ಅದ್ರಾ ಜೈಲಿನ ಮುಖ್ಯಸ್ಥರು ಚಿತ್ರಹಿಂಸೆ ನೀಡುತ್ತಿದ್ದರು ಎಂದು ಅಮೆರಿಕ ಆರೋಪಿಸಿದೆ.
2020ರಿಂದ ಅಮೆರಿಕಾದಲ್ಲಿ ಬಂಧನದಲ್ಲಿರುವ ಸಮೀರ್ ಉಸ್ಮಾನ್ ಅಲ್‍ಶೇಖ್(72 ವರ್ಷ) 2005ರಿಂದ 2008ರವರೆಗೆ ದಮಾಸ್ಕಸ್‍ನ ಸೆಂಟ್ರಲ್ ಜೈಲಿನ(ಅದ್ರಾ ಜೈಲು ಎಂದು ಕುಖ್ಯಾತಿ ಪಡೆದಿದೆ) ಮುಖ್ಯಸ್ಥರಾಗಿದ್ದ ಸಂದರ್ಭ ಕೈದಿಗಳಿಗೆ `ಶಿಕ್ಷೆಯ ವಿಭಾಗ'ದಲ್ಲಿ ಚಿತ್ರಹಿಂಸೆ ನೀಡಲಾಗುತ್ತಿತ್ತು.
ಅಲ್‍ಶೇಖ್ ಹಲವು ಕೈದಿಗಳಿಗೆ ವೈಯಕ್ತಿಕವಾಗಿ ತೀವ್ರವಾದ ದೈಹಿಕ ಮತ್ತು ಮಾನಸಿಕ ನೋವನ್ನುಂಟು ಮಾಡಿದ್ದರು ಮತ್ತು ಈ ರೀತಿ ಮಾಡುವಂತೆ ತಮ್ಮ ಸಿಬ್ಬಂದಿಗಳಿಗೆ ಆದೇಶಿಸಿದ್ದರು. ಕೈದಿಗಳನ್ನು ಸೀಲಿಂಗ್‍ಗೆ ನೇತುಹಾಕಿ ಹೊಡೆಯಲಾಗುತ್ತಿತ್ತು. `ಹಾರುವ ಕಂಬಳಿ' ಎಂದು ಕರೆಯಲಾಗುತ್ತಿದ್ದ ವಸ್ತುವಿನಲ್ಲಿ ಕೈದಿಗಳ ದೇಹವನ್ನು ಸೊಂಟದ ಮಟ್ಟಕ್ಕೆ ಮಡಚಿ ನೆಲದ ಮೇಲೆ ಹೊರಳಿಸಲಾಗುತ್ತಿತ್ತು. ಇದು ಅಸಹನೀಯ ನೋವಿನ ಜತೆಗೆ ಕೆಲವೊಮ್ಮೆ ಬೆನ್ನೆಲುಬು ಮುರಿತಕ್ಕೂ ಕಾರಣವಾಗುತ್ತಿತ್ತು ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
ಈ ಎಲ್ಲಾ ಘೋರ ಅಪರಾಧಗಳಿಗೆ ಅಲ್‍ಶೇಖ್‍ರನ್ನು ಹೊಣೆಯಾಗಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇರಿಸಿದ್ದೇವೆ. ವಿದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಎಸಗಿ ಅಮೆರಿಕದಲ್ಲಿ ಬಚ್ಚಿಟ್ಟುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ತನಿಖಾ ಸಂಸ್ಥೆಯ ಲಾಸ್‍ಏಂಜಲೀಸ್ ವಿಭಾಗದ ಮುಖ್ಯಸ್ಥ ಎಡ್ಡಿ ವ್ಯಾಂಗ್ ಹೇಳಿದ್ದಾರೆ. ಚಿತ್ರಹಿಂಸೆ ನೀಡಿದ್ದಕ್ಕೆ ಮೂರು ಕೌಂಟ್ ಮತ್ತು ಚಿತ್ರಹಿಂಸೆ ನೀಡಲು ಪ್ರಚೋದನೆ ನೀಡಿದ್ದಕ್ಕೆ ಒಂದು ಕೌಂಟ್ ಆರೋಪವನ್ನು ಅಲ್‍ಶೇಖ್ ಎದುರಿಸುತ್ತಿದ್ದು ಆರೋಪ ಸಾಬೀತಾದರೆ ಪ್ರತೀ ಚಿತ್ರಹಿಂಸೆ ಆರೋಪದಲ್ಲೂ ಗರಿಷ್ಠ 20 ವರ್ಷ ಜೈಲುಶಿಕ್ಷೆಗೆ ಗುರಿಯಾಗಬಹುದು.