ಬ್ರಿಟನ್‍ಗೆ ಲಾಭವಾದರೆ ಮಾತ್ರ ಭಾರತದ ಜತೆ ವ್ಯಾಪಾರ ಒಪ್ಪಂದ: ರಿಷಿ ಸುನಕ್
ಲಂಡನ್: ಬ್ರಿಟನ್‍ಗೆ ಲಾಭವಾದರೆ ಮಾತ್ರ ಭಾರತದ ಜತೆಗಿನ ವ್ಯಾಪಾರ ಒಪ್ಪಂದಕ್ಕೆ ತಾನು ಸಮ್ಮತಿಸುತ್ತೇನೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಹೇಳಿದ್ದಾರೆ.
ಈ ವಾರಾಂತ್ಯ ನಡೆಯಲಿರುವ ಜಿ20 ಶೃಂಗಸಭೆಗಾಗಿ ಭಾರತಕ್ಕೆ ಪ್ರಯಾಣಿಸುವ ಮುನ್ನ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡ ಸುನಕ್ , ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆಗಳು ಪ್ರಗತಿಯಲ್ಲಿವೆ. ಆದರೆ ಸಂಪೂರ್ಣ ಬ್ರಿಟನ್‍ಗೆ ಪ್ರಯೋಜನವಾಗುವ ವಿಧಾನವನ್ನು ಮಾತ್ರ ತಾನು ಒಪ್ಪುತ್ತೇನೆ ಎಂದರು.
ರಫ್ತು ಹೆಚ್ಚಳವನ್ನು ಎದುರು ನೋಡುತ್ತಿರುವ ಭಾರತಕ್ಕೆ ಬ್ರಿಟನ್ ಜತೆಗಿನ ವ್ಯಾಪಾರ ಒಪ್ಪಂದ ಅತ್ಯಂತ ಮಹತ್ವದ್ದಾಗಿದೆ. ಇದೇ ವೇಳೆ, ಯುರೋಪಿಯನ್ ಯೂನಿಯನ್‍ನಿಂದ ಹೊರಬಂದಿರುವ ಬ್ರಿಟನ್‍ಗೂ ತನ್ನ ಲಕ್ಸುರಿ ಕಾರುಗಳು, ವಿಸ್ಕಿ, ಕಾನೂನು ಸೇವೆಗಳಿಗೆ ಸಂಬಂಧಿಸಿದ ವ್ಯಾಪಾರ ವಿಸ್ತರಿಸುವ ಅವಕಾಶ ಇದಾಗಿದೆ. ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿ ಬೌದ್ಧಿಕ ಆಸ್ತಿ ಹಕ್ಕುಗಳು(ಪೇಟೆಂಟ್), ಮೂಲದ ನಿಯಮಗಳು(ರೂಲ್ಸ್ ಆಫ್ ಒರಿಜಿನ್) ಮತ್ತು ಹೂಡಿಕೆ ಒಪ್ಪಂದ ಸೇರಿದಂತೆ ಕೆಲವು ಅಂಶಗಳ ಬಗ್ಗೆ ಉಭಯ ದೇಶಗಳ ನಿಯೋಗಗಳ ಮಧ್ಯೆ ಇನ್ನೂ ಚರ್ಚೆ ನಡೆಯುತ್ತಿದೆ.