ರೈಲು ಅಪಹರಣ ಪ್ರಕರಣಕ್ಕೆ ತಿರುವು: ಪಾಕ್ ಸೇನಾ ಹೇಳಿಕೆ ಅಲ್ಲಗಳೆದ ದಾಳಿಕೋರರು

Update: 2025-03-14 08:54 IST
ರೈಲು ಅಪಹರಣ ಪ್ರಕರಣಕ್ಕೆ ತಿರುವು: ಪಾಕ್ ಸೇನಾ ಹೇಳಿಕೆ ಅಲ್ಲಗಳೆದ ದಾಳಿಕೋರರು

PC: x.com/prawasitv

  • whatsapp icon

ಇಸ್ಲಾಮಾಬಾದ್: ಎರಡು ದಿನಗಳ ಸಂಘರ್ಷದ ಬಳಿಕ  ಒತ್ತೆಯಾಳುಗಳ ಸಮಸ್ಯೆ ಇತ್ಯರ್ಥಪಡಿಸಲಾಗಿದೆ ಎಂಬ ಪಾಕಿಸ್ತಾನ ಸೇನೆಯ ಹೇಳಿಕೆಯನ್ನು ಬಲೂಚಿಸ್ತಾನ ಲಿಬರೇಶನ್ ಆರ್ಮಿ (ಬಿಎಲ್ಎ) ಪ್ರತ್ಯೇಕತಾವಾದಿಗಳು ಅಲ್ಲಗಳೆದಿದ್ದಾರೆ. ಒತ್ತೆಯಾಳುಗಳನ್ನು ಇನ್ನೂ ಹಿಡಿದಿಟ್ಟುಕೊಂಡಿದ್ದೇವೆ ಹಾಗೂ ಭದ್ರತಾ ಪಡೆಗಳ ಜತೆಗಿನ ಸಮರ ಮುಂದುವರಿದಿದೆ ಎಂದು ಪ್ರತ್ಯೇಕತಾವಾದಿಗಳ ಸಂಘಟನೆ ತಿಳಿಸಿದೆ.

ರೈಲು ಅಪಹರಣಕ್ಕೆ ಒಳಗಾದ ವಾಯವ್ಯ ಬಲೂಚಿಸ್ತಾನದಲ್ಲಿ 33 ಮಂದಿ ದಾಳಿಕೋರರನ್ನು ಹತ್ಯೆ ಮಾಡಿ 340ಕ್ಕೂ ಹೆಚ್ಚು ಮಂದಿ ಪ್ರಯಾಣಿಕರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪಾಕಿಸ್ತಾನ ಸೇನೆ ಬುಧವಾರ ರಾತ್ರಿ ಹೇಳಿಕೆ ನೀಡಿತ್ತು. ಆದರೆ ಪಾಕ್ ಸೇನೆ ಜನತೆಯನ್ನು ತಪ್ಪುದಾರಿಗೆ ಎಳೆದಿದೆ ಎಂದು ಬಿಎಲ್ಎ ಆಪಾದಿಸಿದ್ದಾಗಿ ರಾಯ್ಟರ್ಸ್ ವರದಿ ಮಾಡಿದೆ. ಪಾಕಿಸ್ತಾನ ಸೇನೆ ರಕ್ಷಿಸಿದ್ದಾಗಿ ಹೇಳಿಕೊಳ್ಳುತ್ತಿರುವ ಒತ್ತೆಯಾಳುಗಳನ್ನು ವಾಸ್ತವವಾಗಿ ಬಿಎಲ್ಎ ಬಿಡುಗಡೆ ಮಾಡಿದೆ ಎಂದು ಮೂಲಗಳು ಹೇಳಿವೆ.

"ಇದೀಗ ಸರ್ಕಾರ ಒತ್ತೆಯಾಳುಗಳನ್ನು ಸಾಯಲು ಬಿಟ್ಟಿದ್ದು, ಅವರ ಸಾವಿನ ಹೊಣೆ ಸರ್ಕಾರದ್ದು" ಎಂದು ಬಿಎಲ್ಎ ವಕ್ತಾರ ಝಿಯಾದ್ ಬಲೋಚ್ ಹೇಳಿದ್ದಾರೆ.

ಏತನ್ಮಧ್ಯೆ ಪಾಕಿಸ್ತಾನ ಪ್ರಧಾನಿ ಶಹಬಾಝ್ ಷರೀಫ್ ಅವರು ಬಲೂಚಿಸ್ತಾನಕ್ಕೆ ಭೇಟಿ ನೀಡಿ ಭದ್ರತಾ ಸ್ಥಿತಿಯನ್ನು ಅವಲೋಕಿಸಿದ್ದು, ದಾಳಿಯ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ಭಯೋತ್ಪಾದನೆಯ ಭೀತಿ ಹೆಚ್ಚುತ್ತಿರುವುದನ್ನು ಖಂಡಿಸಿರುವ ಅವರು, ಇದು ಪಾಕಿಸ್ತಾನಕ್ಕೆ ಅಪಾಯ ಎಂದು ವಿಶ್ಲೇಷಿಸಿದ್ದಾರೆ.

"ಪಾಕಿಸ್ತಾನದ ಶಾಂತಿ ಮತ್ತು ಸಮೃದ್ಧಿ ಭಯೋತ್ಪಾದನೆಯ ನಿರ್ಮೂಲನೆಯಲ್ಲಿ ಅಡಗಿದೆ. ಶಾಂತಿ ಇಲ್ಲದೇ ಸಮೃದ್ಧಿ ಸಾಧ್ಯವಾಗದು" ಎಂದು ಉನ್ನತ ಮಟ್ಟದ ಸಭೆಯಲ್ಲಿ ಅವರು ಹೇಳಿದರು.

ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. 21 ಮಂದಿ ಅಮಾಯಕ ಒತ್ತೆಯಾಳುಗಳು ಮತ್ತು ನಾಲ್ವರು ಸೈನಿಕರು ಕಾರ್ಯಾಚರಣೆಯಲ್ಲಿ ಜೀವ ಕಳೆದುಕೊಂಡಿದ್ದಾರೆ ಎಂದು ಸೇನೆ ಹೇಳಿಕೆ ನೀಡಿದೆ. ಆದರೆ 25 ಮೃತದೇಹಗಳನ್ನು ಘಟನಾ ಸ್ಥಳದಲ್ಲಿ ಪತ್ತೆ ಮಾಡಿ ಪಕ್ಕದ ಮಚ್ ಪಟ್ಟಣಕ್ಕೆ ಒಯ್ಯಲಾಗಿದೆ ಎಂದು ಬಲೂಚಿಸ್ತಾನ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಮೃತರಲ್ಲಿ 19 ಮಂದಿ ಸೇನಾ ಪ್ರಯಾಣಿಕರು, ಒಬ್ಬರು ಪೊಲೀಸರು ಮತ್ತು ಒಬ್ಬರು ರೈಲ್ವೆ ಅಧಿಕಾರಿ ಸೇರಿದ್ದು, ನಾಲ್ಕು ದೇಹಗಳ ಗುರುತು ಪತ್ತೆಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News