ಕದನ ವಿರಾಮ ಪ್ರಸ್ತಾಪ: ಕಠಿಣ ಷರತ್ತು ಮುಂದಿರಿಸಿದ ರಶ್ಯ

Update: 2025-03-14 19:51 IST
ಕದನ ವಿರಾಮ ಪ್ರಸ್ತಾಪ: ಕಠಿಣ ಷರತ್ತು ಮುಂದಿರಿಸಿದ ರಶ್ಯ

ಡೊನಾಲ್ಡ್ ಟ್ರಂಪ್ , ವ್ಲಾದಿಮಿರ್ ಪುಟಿನ್ | PTI

  • whatsapp icon

ಮಾಸ್ಕೋ: ರಶ್ಯವು ಉಕ್ರೇನ್ ಯುದ್ಧಕ್ಕೆ 30 ದಿನಗಳ ಕದನ ವಿರಾಮದ ಪರವಾಗಿದೆ. ಆದರೆ ಅಮೆರಿಕ ಮುಂದಿರಿಸಿದ ಪ್ರಸ್ತಾಪದಲ್ಲಿ ಕೆಲವು ಸೂಕ್ಷ್ಮ ವ್ಯತ್ಯಾಸಗಳಿದ್ದು ಕೆಲವು ಗಂಭೀರ ಪ್ರಶ್ನೆಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತರಿಸಬೇಕಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

ಕದನ ವಿರಾಮಕ್ಕೆ ಸಂಬಂಧಿಸಿ ಕೆಲವು ಕಠಿಣ ಷರತ್ತುಗಳನ್ನು ಪುಟಿನ್ ಮುಂದಿರಿಸಿರುವುದಾಗಿ ವರದಿಯಾಗಿದೆ. ಕದನ ವಿರಾಮದ ಸಂದರ್ಭ ತನ್ನ ಪಡೆಗಳನ್ನು ಸಜ್ಜುಗೊಳಿಸುವುದು ಮತ್ತು ತರಬೇತಿ ನೀಡುವುದನ್ನು ಉಕ್ರೇನ್ ನಿಲ್ಲಿಸಬೇಕು. ಇತರ ದೇಶಗಳು ಉಕ್ರೇನ್‌ ಗೆ ಶಸ್ತ್ರಾಸ್ತ್ರ ಪೂರೈಕೆಯನ್ನು ಸ್ಥಗಿತಗೊಳಿಸಬೇಕು ಎಂದು ಪುಟಿನ್ ಆಗ್ರಹಿಸಿದ್ದಾರೆ.

` ಯುದ್ಧವನ್ನು ನಿಲ್ಲಿಸುವ ಪ್ರಸ್ತಾಪವನ್ನು ನಾವು ಒಪ್ಪುತ್ತೇವೆ. ಆದರೆ ಆ ನಿಲುಗಡೆ ದೀರ್ಘಕಾಲೀನ ಶಾಂತಿಗೆ ಕಾರಣವಾಗುತ್ತದೆ ಮತ್ತು ಬಿಕ್ಕಟ್ಟಿನ ಮೂಲ ಕಾರಣವನ್ನು ಪರಿಹರಿಸುತ್ತದೆ ಎಂಬ ಆಧಾರದ ಮೇಲೆ. ನಾವು 30 ದಿನಗಳ ಕದನ ವಿರಾಮ ಪ್ರಸ್ತಾಪದ ಪರವಿದ್ದೇವೆ. ಆದರೆ ಅಲ್ಲಿ ಕೆಲವೊಂದು ಸೂಕ್ಷ್ಮ ವ್ಯತ್ಯಾಸಗಳಿವೆ ಮತ್ತು ಇದು ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಗಂಭೀರವಾದ ಪ್ರಶ್ನೆಗಳಿವೆ. ನಾವು ನೇರವಾಗಿ ಅಮೆರಿಕ ಅಧ್ಯಕ್ಷರ ಜತೆ ಮಾತನಾಡುವ ಅಗತ್ಯವಿದೆ ಎಂದು ಭಾವಿಸುತ್ತೇನೆ' ಎಂದು ಮಾಸ್ಕೋದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪುಟಿನ್ ಹೇಳಿದ್ದಾರೆ.

ಈ ಮಧ್ಯೆ, ಪುಟಿನ್ ಗುರುವಾರ ತಡರಾತ್ರಿ ಟ್ರಂಪ್ ಅವರ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಜೊತೆ ಮಾಸ್ಕೋದಲ್ಲಿ ಸಭೆ ನಡೆಸಿದ್ದಾರೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಶುಕ್ರವಾರ ಹೇಳಿದ್ದಾರೆ.

ಉಕ್ರೇನ್ ಕದನ ವಿರಾಮ ಪ್ರಸ್ತಾಪದಲ್ಲಿ `ಎಚ್ಚರಿಕೆಯ ಆಶಾವಾದಕ್ಕೆ' ಆಧಾರಗಳಿವೆ . ಸ್ಟೀವ್ ವಿಟ್ಕಾಫ್ ಮೂಲಕ ಟ್ರಂಪ್‌ ಗೆ ಪುಟಿನ್ ಸಂದೇಶ ರವಾನಿಸಿದ್ದಾರೆ ಮತ್ತು ಉಕ್ರೇನ್ ಕುರಿತು ಅಮೆರಿಕದ ಚಿಂತನೆಯ ಬಗ್ಗೆ ಅಮೆರಿಕದಿಂದ ಮಾಹಿತಿ ಪಡೆದಿದ್ದಾರೆ. ಇತ್ಯರ್ಥದ ವಿಷಯದಲ್ಲಿ ಟ್ರಂಪ್ ಅವರ ನಿಲುವನ್ನು ಪುಟಿನ್ ಬೆಂಬಲಿಸಿದ್ದಾರೆ. ಆದರೆ ಅವರು(ಪುಟಿನ್) ಒಟ್ಟಿಗೆ ಉತ್ತರಿಸಬೇಕಾದ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ' ಎಂದು ಪೆಸ್ಕೋವ್ ಹೇಳಿದ್ದಾರೆ.

ಹೌದು, ಮಾಡಬೇಕಾಗಿರುವ ವಿಷಯಗಳು ಇನ್ನೂ ಬಹಳಷ್ಟಿವೆ. ಆದರೂ, ಟ್ರಂಪ್ ಅವರ ನಿಲುವಿನ ಜತೆ ಅಧ್ಯಕ್ಷರು ಸಹಮತ ವ್ಯಕ್ತಪಡಿಸಿದ್ದಾರೆ. ವಿಟ್ಕಾಫ್ ಅವರು ಟ್ರಂಪ್‌ ಗೆ ವರದಿ ಒಪ್ಪಿಸಿದ ಬಳಿಕ ಇಬ್ಬರು ಅಧ್ಯಕ್ಷರ ನಡುವೆ ದೂರವಾಣಿ ಮೂಲಕ ಮಾತುಕತೆಯ ಸಮಯವನ್ನು ರಶ್ಯ ಮತ್ತು ಅಮೆರಿಕ ಅಧಿಕಾರಿಗಳು ನಿಗದಿ ಪಡಿಸಲಿದ್ದಾರೆ ಎಂದು ಪೆಸ್ಕೋವ್ ಹೇಳಿದ್ದಾರೆ.

► ಕದನ ವಿರಾಮ ಮಾತುಕತೆ ಆಶಾದಾಯಕ, ಆದರೆ ಪೂರ್ಣವಾಗಿಲ್ಲ: ಪುಟಿನ್ ಹೇಳಿಕೆಗೆ ಟ್ರಂಪ್ ಪ್ರತಿಕ್ರಿಯೆ

ಅಮೆರಿಕ ಬೆಂಬಲಿತ ಉಕ್ರೇನ್ ಕದನ ವಿರಾಮ ಒಪ್ಪಂದ ಪ್ರಸ್ತಾಪದ ಕುರಿತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಹೇಳಿಕೆ `ಆಶಾದಾಯಕ, ಆದರೆ ಪೂರ್ಣವಾಗಿಲ್ಲ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.

ಸಂಭಾವ್ಯ ಉಕ್ರೇನ್ ಒಪ್ಪಂದದ ಬಗ್ಗೆ ಪುಟಿನ್ ಅತ್ಯಂತ ಆಶಾದಾಯಕ ಹೇಳಿಕೆ ನೀಡಿದ್ದಾರೆ. ಆದರೆ ಅದು ಪೂರ್ಣವಾಗಿಲ್ಲ. ಅವರನ್ನು ಭೇಟಿಮಾಡಿ ಅವರೊಂದಿಗೆ ಮಾತನಾಡಲು ಇಚ್ಛಿಸುತ್ತೇನೆ. ಆದರೆ ಇದು ಕ್ಷಿಪ್ರವಾಗಿ ನಡೆಯಬೇಕಿದೆ. ಅಂತಿಮ ಒಪ್ಪಂದದ ಬಗ್ಗೆ ಬಹಳಷ್ಟು ವಿವರಗಳನ್ನು ವಾಸ್ತವವಾಗಿ ಚರ್ಚಿಸಲಾಗಿದೆ. ರಶ್ಯ ಇದರ ಪರವಾಗಿದೆಯೇ ಎಂಬುದನ್ನು ನೋಡಬೇಕಿದೆ. ಇರದಿದ್ದರೆ ಇದು ಜಗತ್ತಿಗೆ ಅತ್ಯಂತ ನಿರಾಶಾದಾಯಕ ಕ್ಷಣವಾಗಲಿದೆ' ಎಂದು ಟ್ರಂಪ್ ಹೇಳಿದ್ದಾರೆ.

`ನಾವು ಏನು ಮಾಡಬೇಕು, ಯಾವ ಬಗ್ಗೆ ಚರ್ಚಿಸಬೇಕು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನಮಗಿದೆ. ಉಕ್ರೇನ್ ಕಳೆದುಕೊಳ್ಳಲಿರುವ, ಉಳಿಸಿಕೊಳ್ಳಲಿರುವ ಭೂಮಿಯ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಇದರಲ್ಲಿ ಅತೀ ದೊಡ್ಡ ವಿದ್ಯುತ್ ಸ್ಥಾವರವೂ ಒಳಗೊಂಡಿದೆ. ವಿದ್ಯುತ್ ಸ್ಥಾವರ ಯಾರಿಗೆ ಸೇರಲಿದೆ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ ಎಂದು ಝಪೋರಿಜಿಯಾ ಪರಮಾಣು ಸ್ಥಾವರವನ್ನು ಪರೋಕ್ಷವಾಗಿ ಉಲ್ಲೇಖಿಸಿ ಟ್ರಂಪ್ ಹೇಳಿದ್ದಾರೆ. ಉಕ್ರೇನ್ ಭೂಪ್ರದೇಶದಲ್ಲಿರುವ ಝಪೋರಿಜಿಯಾ ಅಣು ವಿದ್ಯುತ್ ಸ್ಥಾವರ ಈಗ ರಶ್ಯದ ನಿಯಂತ್ರಣದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News