ಗಾಝಾದಿಂದ ಸ್ಥಳಾಂತರಗೊಳ್ಳುವ ಫೆಲೆಸ್ತೀನೀಯರಿಗೆ ಆಫ್ರಿಕಾದಲ್ಲಿ ಪುನರ್ವಸತಿಗೆ ಅಮೆರಿಕ ಯೋಜನೆ
PC : PTI
ಜೆರುಸಲೇಂ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾವಿತ ಯುದ್ಧಾನಂತರದ ಯೋಜನೆಯಡಿ ಗಾಝಾ ಪಟ್ಟಿಯಿಂದ ಸ್ಥಳಾಂತರಗೊಳ್ಳುವ ಫೆಲೆಸ್ತೀನೀಯರಿಗೆ ಪೂರ್ವ ಆಫ್ರಿಕಾದಲ್ಲಿ ಪುನರ್ವಸತಿ ಕಲ್ಪಿಸಲು ಅಮೆರಿಕ ಮತ್ತು ಇಸ್ರೇಲ್ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.
ಅಮೆರಿಕ ಮತ್ತು ಇಸ್ರೇಲ್‍ನ ಉನ್ನತ ಅಧಿಕಾರಿಗಳು ಪೂರ್ವ ಆಫ್ರಿಕಾದ ಸುಡಾನ್, ಸೊಮಾಲಿಯಾ ಮತ್ತು ಸೊಮಾಲಿಯಾದಿಂದ ಪ್ರತ್ಯೇಕಗೊಂಡಿರುವ ಸೊಮಾಲಿಲ್ಯಾಂಡ್ ಸರಕಾರದ ಜತೆ ಈಗಾಗಲೇ ಈ ನಿಟ್ಟಿನಲ್ಲಿ ಮಾತುಕತೆ ಆರಂಭಿಸಿದ್ದಾರೆ. ವ್ಯಾಪಕ ಖಂಡನೆಗೆ ಕಾರಣವಾಗಿರುವ ಯೋಜನೆಯನ್ನು ಮುಂದುವರಿಸುವ ಅಮೆರಿಕ ಮತ್ತು ಇಸ್ರೇಲ್‍ನ ನಿರ್ಧಾರವು ಗಂಭೀರ ಕಾನೂನು ಮತ್ತು ನೈತಿಕ ಪ್ರಶ್ನೆಗಳನ್ನು ಮೂಡಿಸಿದೆ. ಯಾಕೆಂದರೆ ಪೂರ್ವ ಆಫ್ರಿಕಾದ ಈ ಮೂರೂ ಪ್ರದೇಶಗಳು ಬಡತನದ ಬೇಗೆಯಲ್ಲಿದ್ದು ಕೆಲವು ಪ್ರದೇಶಗಳಲ್ಲಿ ಹಿಂಸಾಚಾರ ಮರುಕಳಿಸುತ್ತಿದೆ. ಅಮೆರಿಕದ ಪ್ರಸ್ತಾಪವನ್ನು ತಿರಸ್ಕರಿಸಿರುವುದಾಗಿ ಸುಡಾನ್ ನ ಅಧಿಕಾರಿಗಳು ಹೇಳಿದ್ದಾರೆ, ಇಂತಹ ಪ್ರಸ್ತಾಪವನ್ನು ಮುಂದಿರಿಸಿ ತಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದು ಸೊಮಾಲಿಯಾ ಮತ್ತು ಸೊಮಾಲಿಲ್ಯಾಂಡ್ ನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆದರೆ ಸೊಮಾಲಿಯಾ ಮತ್ತು ಸೊಮಾಲಿಲ್ಯಾಂಡ್ ಅಧಿಕಾರಿಗಳನ್ನು ಇಸ್ರೇಲ್ ಮತ್ತು ಅಮೆರಿಕದ ಜಂಟಿ ನಿಯೋಗ ಹಾಗೂ ಸುಡಾನ್ ನ ಅಧಿಕಾರಿಗಳನ್ನು ಅಮೆರಿಕದ ನಿಯೋಗ ಸಂಪರ್ಕಿಸಿರುವುದನ್ನು ಉನ್ನತ ಮೂಲಗಳು ದೃಢಪಡಿಸಿವೆ. ಈ ಪ್ರದೇಶಗಳಿಗೆ ಆರ್ಥಿಕ, ರಾಜತಾಂತ್ರಿಕ ಮತ್ತು ಭದ್ರತಾ ನೆರವು ನೀಡುವುದಾಗಿ ಭರವಸೆ ನೀಡಲಾಗಿದೆ. ಇದೇ ಸೂತ್ರವನ್ನು ಮುಂದಿರಿಸಿಕೊಂಡು ಐದು ವರ್ಷಗಳ ಹಿಂದೆ ಟ್ರಂಪ್ ಇಸ್ರೇಲ್ ಮತ್ತು ನಾಲ್ಕು ಅರಬ್ ರಾಷ್ಟ್ರಗಳ ನಡುವಿನ ಅಬ್ರಹಾಂ ಒಪ್ಪಂದವನ್ನು ರೂಪಿಸಿದ್ದರು ಎಂದು ವರದಿ ಹೇಳಿದೆ.
ಟ್ರಂಪ್ ಅವರ ಯೋಜನೆಯಡಿ, ಗಾಝಾದ 2 ದಶಲಕ್ಷಕ್ಕೂ ಅಧಿಕ ಜನರನ್ನು ಶಾಶ್ವತವಾಗಿ ಸ್ಥಳಾಂತರಿಸಲಾಗುವುದು. ಬಳಿಕ ಗಾಝಾ ಪ್ರದೇಶವನ್ನು ಅಮೆರಿಕ ನಿಯಂತ್ರಣಕ್ಕೆ ಪಡೆದುಕೊಂಡು ಅದರ ಮರುನಿರ್ಮಾಣ ಕಾರ್ಯ ನಡೆಸಲಿದೆ.