ಮುಂದಿನ ಸಿಐಎ ಮುಖ್ಯಸ್ಥರಾಗುವ ಸಾಧ್ಯತೆ ಇರುವ ಟ್ರಂಪ್ ನಿಷ್ಠ ಕೇಶ್ ಪಟೇಲ್ ಯಾರು?

Update: 2024-11-07 07:10 GMT

ಕೇಶ್ ಪಟೇಲ್  | PC : X \  @mansibhagat1009

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಪರಾಭವಗೊಳಿಸಿ, ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ 78 ವರ್ಷದ ಡೊನಾಲ್ಡ್ ಟ್ರಂಪ್, ತಮ್ಮ ಸಂಪುಟಕ್ಕೆ ಉನ್ನತ ದರ್ಜೆಯ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಪೈಕಿ ಸಿಐಎ ನಿರ್ದೇಶಕ ಹುದ್ದೆಗೆ ಭಾರತೀಯ ಮೂಲದ ಹಾಗೂ ಡೊನಾಲ್ಡ್ ಟ್ರಂಪ್ ಅವರ ನಿಷ್ಠ ಕಶ್ಯಪ್ ‘ಕಶ್’ ಪಟೇಲ್ ಹೆಸರು ಮುಂಚೂಣಿಯಲ್ಲಿದೆ ಎಂದು ವರದಿಯಾಗಿದೆ.

ಮಾಜಿ ರಿಪಬ್ಲಿಕನ್ ಪಕ್ಷದ ಸಿಬ್ಬಂದಿಯಾಗಿರುವ, ರಕ್ಷಣಾ ಇಲಾಖೆ ಹಾಗೂ ಗುಪ್ತಚರ ವಿಭಾಗದಲ್ಲಿ ಹಲವಾರು ಉನ್ನತ ದರ್ಜೆಯ ಹುದ್ದೆಗಳನ್ನು ನಿಭಾಯಿಸಿರುವ ಕೇಶ್ ಪಟೇಲ್, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಅವರು ಈ ಮುನ್ನ ರಕ್ಷಣಾ ಪ್ರಭಾರ ಕಾರ್ಯದರ್ಶಿಯ ಸಿಬ್ಬಂದಿಗಳ ಮುಖ್ಯಸ್ಥ ಕ್ರಿಸ್ಟೋಫರ್ ಮಿಲ್ಲರ್ ಅವರ ಕೈಕೆಳಗೆ ಕೆಲಸ ಮಾಡಿದ್ದರು.

ಫೆಬ್ರವರಿ 25, 1980ರಂದು ನ್ಯೂಯಾರ್ಕ್ ನಲ್ಲಿ ಜನಿಸಿದ ಪಟೇಲ್ ಅವರ ಪೋಷಕರು ಭಾರತ ಮತ್ತು ಪೂರ್ವ ಆಫ್ರಿಕಾದ ವಲಸಿಗರಾಗಿದ್ದಾರೆ. ಪಟೇಲ್ ಮೂಲತಃ ಗುಜರಾತ್ ನ ವಡೋದರದ ಬೇರು ಹೊಂದಿದ್ದಾರೆ. ರಿಚ್ಮಂಡ್ ವಿಶ್ವವಿದ್ಯಾಲಯದಲ್ಲಿ ಪದವಿಪೂರ್ವ ವ್ಯಾಸಂಗ ಪೂರೈಸಿದ್ದ ಪಟೇಲ್, ನಂತರ ಕಾನೂನು ಪದವಿಯನ್ನು ಪಡೆದಿದ್ದರು. ಇದರೊಂದಿಗೆ ಯೂನಿವರ್ಸಿಟಿ ಕಾಲೇಜ್ ಲಂಡನ್ ನಿಂದ ಅಂತಾರಾಷ್ಟ್ರೀಯ ಕಾನೂನಿನಲ್ಲಿ ಪ್ರಮಾಣ ಪತ್ರವನ್ನೂ ಪಡೆದಿದ್ದರು.

ಮೊದಲಿಗೆ ಖ್ಯಾತ ಕಾನೂನು ಸಂಸ್ಥೆಗಳಲ್ಲಿ ಅವಕಾಶ ಪಡೆಯಲು ಹೋರಾಡಿದ್ದ ಪಟೇಲ್, ನಂತರ ಸಾರ್ವಜನಿಕ ಅಭಿಯೋಜಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಹತ್ಯೆ, ಮಾದಕ ದ್ರವ್ಯ ಕಳ್ಳ ಸಾಗಣೆ ಹಾಗೂ ಹಣಕಾಸು ಅಪರಾಧಗಳಂಥ ಸಂಕೀರ್ಣ ಪ್ರಕರಣಗಳನ್ನು ಒಂಬತ್ತು ವರ್ಷಗಳ ಕಾಲ ಮಿಯಾಮಿ ನ್ಯಾಯಾಲಯದಲ್ಲಿ ನಿರ್ವಹಿಸಿದ್ದರು.

ಇದಾದ ನಂತರ, ನ್ಯಾಯ ಇಲಾಖೆಯಲ್ಲಿ ಭಯೋತ್ಪಾದನಾ ಪ್ರಾಸಿಕ್ಯೂಟರ್ ಆಗುವ ಮೂಲಕ ಅವರು ಸರಕಾರಿ ಹುದ್ದೆಗೆ ಸೇರ್ಪಡೆಯಾಗಿದ್ದರು. ಅವರು ಅಲ್-ಖೈದಾ ಹಾಗೂ ಐಸಿಸ್ ನಂತಹ ಗುಂಪುಗಳ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ವಿರುದ್ಧದ ತನಿಖೆಯಲ್ಲಿ ಪ್ರಾಸಿಕ್ಯೂಷನ್ ನೇತೃತ್ವ ವಹಿಸಿದ್ದರು. ಇದಲ್ಲದೆ, ನ್ಯಾಯ ಇಲಾಖೆಯಲ್ಲಿ ಜಂಟಿ ವಿಶೇಷ ಕಾರ್ಯಾಚರಣೆ ಕಮಾಂಡ್ ಗೆ ಮಧ್ಯವರ್ತಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ಮೂಲಕ, ಜಾಗತಿಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದರು.

ಇದಾದ ನಂತರ, ನ್ಯಾಷನಲ್ ಇಂಟಲಿಜೆನ್ಸ್ ನ ಪ್ರಭಾರ ನಿರ್ದೇಶಕರಿಗೆ ಪ್ರಧಾನ ಸಹಾಯಕರಾಗಿ ನೇಮಕಗೊಂಡ ಪಟೇಲ್, 17 ಗುಪ್ತಚರ ಸಂಸ್ಥೆಗಳ ಮೇಲುಸ್ತುವಾರಿ ವಹಿಸಿದ್ದರು. ಅಲ್ಲದೆ, ಅಧ್ಯಕ್ಷರ ದಿನಚರಿಯ ಸಂಕ್ಷಿಪ್ತ ವಿವರಣೆಯನ್ನೂ ಒದಗಿಸುತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News