ಸೌದಿ ಅರೆಬಿಯಾದಲ್ಲಿ ಪುಟಿನ್ ಜತೆ ಸಭೆ: ಟ್ರಂಪ್ ಘೋಷಣೆ

ವ್ಲಾದಿಮಿರ್ ಪುಟಿನ್ , ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ರಶ್ಯ-ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸುವ ಪ್ರಯತ್ನದ ಭಾಗವಾಗಿ ಸೌದಿ ಅರೆಬಿಯಾದಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಮತ್ತು ಪುಟಿನ್ ನಡುವೆ ದೂರವಾಣಿಯಲ್ಲಿ ಮಾತುಕತೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದ ಕೆಲವೇ ಗಂಟೆಗಳ ಬಳಿಕ ಶ್ವೇತಭವನದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಟ್ರಂಪ್ `ನಾವು ಸೌದಿ ಅರೆಬಿಯಾದಲ್ಲಿ ಭೇಟಿಯಾಗಲಿದ್ದೇವೆ' ಎಂದರು. ಇಬ್ಬರೂ ಟೆಲಿಫೋನ್ ಮೂಲಕ ಸುದೀರ್ಘ ಮತ್ತು ರಚನಾತ್ಮಕ ಮಾತುಕತೆ ನಡೆಸಿದ್ದು ತಕ್ಷಣ ಉಕ್ರೇನ್ ಶಾಂತಿ ಮಾತುಕತೆಯನ್ನು ಆರಂಭಿಸಲು ಸಮ್ಮತಿಸಿದ್ದೇವೆ. ಜತೆಗೆ, ಉಕ್ರೇನ್ ನಲ್ಲಿ ಹೊಸದಾಗಿ ಚುನಾವಣೆ ನಡೆಯುವ ಅಗತ್ಯವೂ ಇದೆ' ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.
ಉಕ್ರೇನ್ ಜತೆ ನೇರ ಮಾತುಕತೆ ನಡೆಸಲು ಸಿದ್ಧ. ಆದರೆ ಝೆಲೆನ್ಸ್ಕಿ ಜತೆಗಲ್ಲ. ಯಾಕೆಂದರೆ ಅವರ ಅಧಿಕಾರಾವಧಿ ಮುಗಿದಿದ್ದು ನ್ಯಾಯಸಮ್ಮತವಲ್ಲದ ಅಧ್ಯಕ್ಷ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕಳೆದ ತಿಂಗಳು ಹೇಳಿಕೆ ನೀಡಿದ್ದರು.