ಫೆಲೆಸ್ತೀನ್ ವಿರುದ್ಧ ಟ್ವೀಟ್ ; ಮಂಗಳೂರಿನ ವೈದ್ಯ ಸುನಿಲ್ ರಾವ್ ಬಹರೈನ್ ಆಸ್ಪತ್ರೆಯಿಂದ ವಜಾ

Update: 2023-10-20 18:28 GMT

Dr Sunil Rao (Photo: X)

ಮನಾಮ: ರಾಯಲ್ ಬಹರೈನ್‌ ಆಸ್ಪತ್ರೆಯ ಇಂಟರ್ನಲ್‌ ಮೆಡಿಸಿನ್‌ ವಿಭಾಗದ ಮಂಗಳೂರು ಮೂಲದ ಡಾ.ಸುನೀಲ್ ರಾವ್ ಅವರನ್ನು, ಇಸ್ರೇಲ್-ಹಮಾಸ್ ಸಂಘರ್ಷದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಗಾಝಾ ಪಟ್ಟಿ ಮೇಲೆ ಇಸ್ರೇಲ್ ಆಕ್ರಮಣದಿಂದ ಭಾರೀ ನಷ್ಟ ಆಗುತ್ತಿರುವಾಗ ಅವರ ವಿವಾದಾತ್ಮಕ ಕಾಮೆಂಟ್‌ಗಳು ಇಸ್ರೇಲ್‌ಗೆ ಬೆಂಬಲ ಸೂಚಿಸಿದ್ದವು.

 

 

ಡಾ. ರಾವ್ ಅವರು X ನಲ್ಲಿ ಈ ಕುರಿತ ಪೋಸ್ಟ್ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣ ಬಳಕೆದಾರರು ವರದಿ ಮಾಡಿದ ನಂತರ ಈ ವಿಚಾರ ಬಹರೈನ್‌ ಅಧಿಕಾರಿಗಳ ಗಮನ ಸೆಳೆಯಿತು. ಈ ಕುರಿತು ಆಸ್ಪತ್ರೆಯು X ನಲ್ಲಿ ಡಾ. ರಾವ್ ಅವರ ಅಭಿಪ್ರಾಯಗಳು ವೈಯಕ್ತಿಕ ಮತ್ತು ಸಂಸ್ಥೆಯ ಮೌಲ್ಯಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿ ಅಧಿಕೃತ ಹೇಳಿಕೆಯನ್ನು ನೀಡಿತು. ಜೊತೆಗೆ, ಅವರ ಹೇಳಿಕೆಗಳು ಸಂಸ್ಥೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿವೆ. ಆ ಕಾರಣಕ್ಕಾಗಿ ಅವರನ್ನು ತಕ್ಷಣದಿಂದಲೇ ಕೆಲಸದಿಂದ ವಜಾಗೊಳಿಸಲಾಯಿತು ಎಂದು ಉಲ್ಲೇಖಿಸಿದೆ.

ತಮ್ಮ ಪೋಸ್ಟ್‌ ವಿವಾದ ಸ್ವರೂಪ ಪಡೆದುಕೊಂಡ ಬಳಿಕ, ಡಾ. ರಾವ್ X ನಲ್ಲಿ ಕ್ಷಮೆಯಾಚಿಸಿದರು. ಟ್ವೀಟ್ ನ ಅಸೂಕ್ಷ್ಮತೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, "ಈ ವೇದಿಕೆಯಲ್ಲಿ ನಾನು ಪೋಸ್ಟ್ ಮಾಡಿದ ಹೇಳಿಕೆಗೆ ಕ್ಷಮೆಯಾಚಿಸಲು ಬಯಸುತ್ತೇನೆ. ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ ನನ್ನ ಟ್ವೀಟ್ ಸಂವೇದನಾ ರಹಿತವಾಗಿತ್ತು. ಒಬ್ಬ ವೈದ್ಯನಾಗಿ ನಾನು ಎಲ್ಲಾ ಜೀವಗಳನ್ನು ಗೌರವಿಸುತ್ತೇನೆ. ನಾನು ಈ ದೇಶ, ಇಲ್ಲಿನ ಜನರು ಮತ್ತು ಅವರ ಧರ್ಮವನ್ನು ಆಳವಾಗಿ ಗೌರವಿಸುತ್ತೇನೆ. ನಾನು ಕಳೆದ 10 ವರ್ಷಗಳಿಂದ ಇಲ್ಲಿದ್ದೇನೆ." ಎಂದು ಪೋಸ್ಟ್‌ ನಲ್ಲಿ ಹೇಳಿದ್ದಾರೆ.

ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು(ಕೆಎಂಸಿ) ಹಾಗೂ ವಿಶಾಖಪಟ್ಟಣಂನ ಆಂಧ್ರ ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿ ಮಂಗಳೂರಿನ ಡಾ. ಸುನೀಲ್ ರಾವ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸುಮಾರು 20 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಈಗಾಗಲೇ ಆಸ್ಪತ್ರೆಯ ಅಧಿಕೃತ ವೆಬ್‌ಸೈಟ್‌ನಿಂದ ಅವರ ಪ್ರೊಫೈಲ್ ಅನ್ನು ತೆಗೆದುಹಾಕಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News