ಇಸ್ರೇಲ್ ಸೇನೆಯಿಂದ ಇಬ್ಬರು ಫೆಲೆಸ್ತೀನಿಯರ ಹತ್ಯೆ

Update: 2023-09-24 17:20 GMT

ಸಾಂದರ್ಭಿಕ ಚಿತ್ರ Photo: PTI

ಗಾಝಾ : ಪಶ್ಚಿಮದಂಡೆಯಲ್ಲಿ ಇಸ್ರೇಲಿ ಪಡೆಗಳು ರವಿವಾರ ನಸುಕಿನಲ್ಲಿ ದಾಳಿ ನಡೆಸಿ ಇಬ್ಬರು ಫೆಲೆಸ್ತೀನಿ ನಾಗರಿಕರನ್ನು ಹತ್ಯೆಗೈದಿವೆ ಎಂದು ಪೆಲೆಸ್ತೀನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಇಸ್ರೇಲ್ ಸೇನೆ ಕೂಡಾ ಈ ಬಗ್ಗೆ ಹೇಳಿಕೆ ನೀಡಿದ್ದು, ಆಕ್ರಮಿತ ಪಶ್ಚಿಮದಂಡೆ ಪ್ರದೇಶದಲ್ಲಿ ಉಗ್ರಗಾಮಿಗಳ ‘ ಕಾರ್ಯನಿರ್ವಹಣಾ ಕಮಾಂಡ್ ಸೆಂಟರ್’ ಒಂದನ್ನು ನಿಷ್ಕ್ರಿಯಗೊಳಿಸಿರುವುದಾಗಿ ಹೇಳಿದೆ.

ತುಲ್ಕಾರೆಮ್ ಪಟ್ಟಣದಲ್ಲಿ ಇಸ್ರೇಲ್ ಸೇನೆಯು ಇಬ್ಬರು ಫೆಲೆಸ್ತೀನಿಯರಿಗೆ ನೇರವಾಗಿ ತಲೆಗೆ ಗುಂಡಿಕ್ಕಿದ್ದು, ಅವರು ಸ್ಥದಲ್ಲೇ ಸಾವನ್ನಪ್ಪಿದ್ದಾರೆಂದು ಸಚಿವಾಲಯ ತಿಳಿಸಿದೆ.

ತುಲ್ಕಾರೆಮ್ ಪಟ್ಟಣ ಸಮೀಪದ ನೂರ್ ಶಾಮ್ಸ್ ನಿರಾಶ್ರಿತ ಶಿಬಿರದಲ್ಲಿ ಘರ್ಷಣೆ ನಡೆದಿದ್ದು, ತನ್ನ ಕೆಲವು ಸೈನಿಕರಿಗೂ ಗುಂಡೇಟಿನ ಗಾಯಗಳಾಗಿವೆ ಎಂದು ಇಸ್ರೇಲ್ ಸೇನೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇಸ್ರೇಲ್ ಸೇನೆಯ ದಾಳಿಯಲ್ಲಿ ಸಾವನ್ನಪ್ಪಿದವರನ್ನು 21 ವರ್ಷ ವಯಸ್ಸಿನ ಉಸೈದ್ ಅಬು ಅಲಿ ಹಾಗೂ 32 ವರ್ಷ ವಯಸ್ಸಿನ ಅಬ್ದಲ್ ಅಲ್ ರಹ್ಮಾನ್ ಅಬು ದಾಗಾಶ್ ಎಂದು ಗುರುತಿಸಲಾಗಿದೆ ಎಂದು ಪೆಲೆಸ್ತೀನ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಮಧ್ಯೆ ಪೆಲೆಸ್ತೀನ್‌ವಿಮೋಚನಾ ಸಂಘಟನೆ ಹಮಸ್ , ‘ಇಂದು ಹುತಾತ್ಮರಾದವರಲ್ಲಿ ಓರ್ವ ತನ್ನ ಹೋರಾಟಗಾರ’ ಎಂಬುದಾಗಿ ಹೇಳಿದೆ. ಮೃತಪಟ್ಟ ಇನ್ನೋರ್ವ ಯುವಕ ಅಬು ದಘಾಶ್ ಅವರು ಹೊರಗಡೆ ಏನು ನಡೆಯುತ್ತಿದೆಯೆಂದು ತಿಳಿಯಲು ಮನೆಯ ತಾರಸಿಗೆ ಬಂದಾಗ ಅತ ಇಸ್ರೇಲಿ ಸೈನಿಕರ ಹೊಂಚು ದಾಳಿಗೆ ಬಲಿಯಾದನೆಂದು ಕುಟುಂಬಿಕರು ತಿಳಿಸಿದ್ದಾರೆ.

ಇಸ್ರೇಲ್ ಸೇನೆಯು ರವಿವಾರ ನಸುಕಿನಲ್ಲಿ ಸುಮಾರು 2:00 ಗಂಟೆಯ ವೇಳೆಗೆ ನಿರಾಶ್ರಿತ ಶಿಬಿರದ ಮೇಲೆ ದಾಳಿ ನಡೆಸಿದ್ದು, ಬೀದಿಗಳನ್ನು ಹಾಗೂ ಕೆಲವು ಮನೆಗಳನ್ನು ನಾಶಗೊಳಿಸಿದೆಯೆಂದು ಶಿಬಿರದಲ್ಲಿರುವ ಪೆಲೆಸ್ತೀನ್ ಕೈದಿಗಳ ಹಕ್ಕುಗಳ ಹೋರಾಟ ಸಂಸ್ಥೆಯ ಪ್ರತಿನಿಧಿ ಇಬ್ರಾಹೀಂ ಅಲ್ ನಿಮೆರ್ ಆಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News