ರಶ್ಯದ ತೈಲ ಸಂಸ್ಕರಣಾಗಾರಕ್ಕೆ ಉಕ್ರೇನ್ ಡ್ರೋನ್ ದಾಳಿ: ವರದಿ
ಮಾಸ್ಕೋ: ಮಾಸ್ಕೋವನ್ನು ಗುರಿಯಾಗಿಸಿಕೊಂಡು ಉಕ್ರೇನ್ ರವಿವಾರ 35ಕ್ಕೂ ಅಧಿಕ ಡ್ರೋನ್ ದಾಳಿ ನಡೆಸಿದ್ದು ತೈಲ ಸಂಸ್ಕರಣಾಗಾರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ಗಡಿಭಾಗದಲ್ಲಿ ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತಗೊಂಡಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ರಶ್ಯದ ಅಧ್ಯಕ್ಷೀಯ ಚುನಾವಣೆಗೆ ಅಡ್ಡಿಪಡಿಸಲು ಉಕ್ರೇನ್ ಪ್ರಯತ್ನಿಸುತ್ತಿದೆ ಎಂದು ರಶ್ಯ ಆರೋಪಿಸಿದ್ದು ಉಕ್ರೇನ್ ವಿರುದ್ಧ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ದಕ್ಷಿಣ ರಶ್ಯದ ಕ್ರಸ್ನೊದರ್ ಪ್ರಾಂತದಲ್ಲಿ 17 ಡ್ರೋನ್‍ಗಳನ್ನು, ಮಾಸ್ಕೋ ಪ್ರಾಂತದಲ್ಲಿ 4 ಹಾಗೂ ಇತರ 6 ಪ್ರಾಂತಗಳಲ್ಲಿ 14 ಡ್ರೋನ್‍ಗಳನ್ನು ಹೊಡೆದುರುಳಿಸಲಾಗಿದೆ. ಆದರೆ ಒಂದು ಡ್ರೋನ್ ಕ್ರಸ್ನೊದರ್ ನ ಸ್ಲವ್ಯಾಂಸ್ಕ್ ತೈಲ ಸಂಸ್ಕರಣಾಗಾರದ ಬಳಿ ಅಪ್ಪಳಿಸಿದ್ದರಿಂದ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಬೆಂಕಿಯನ್ನು ನಂದಿಸಲಾಗಿದ್ದು ಸಂಸ್ಕರಣಾಗಾರದ ಸಿಬಂದಿಯನ್ನು ತೆರವುಗೊಳಿಸಲಾಗಿದೆ. ಬೆಲ್ಗೊರೊಡ್ ಪ್ರಾಂತದ ಕಡೆ ಉಕ್ರೇನ್ ಪ್ರಯೋಗಿಸಿದ 12 ರಾಕೆಟ್‍ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ. ಈ ದಾಳಿಯು ಉಕ್ರೇನ್‍ನ ದೀರ್ಘ ಶ್ರೇಣಿ ದಾಳಿಯ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದು ಇದಕ್ಕಾಗಿ ಮಿಲಿಟರಿ ಪಡೆ ಹಾಗೂ ಗುಪ್ತಚರ ಪಡೆಯನ್ನು ಅಭಿನಂದಿಸುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಈ ಮಧ್ಯೆ, ಕಪ್ಪುಸಮುದ್ರದ ಒಡೆಸಾ ಬಂದರಿನ ಮೇಲೆ ರಶ್ಯ ನಡೆಸಿದ ವಾಯುದಾಳಿಯಲ್ಲಿ ಕೃಷಿ ಉದ್ಯಮಕ್ಕೆ ಹಾನಿಯಾಗಿದ್ದು ಹಲವಾರು ಕೈಗಾರಿಕಾ ಕಟ್ಟಡಗಳು ನಾಶಗೊಂಡಿವೆ ಎಂದು ಉಕ್ರೇನ್ ರಕ್ಷಣಾ ಇಲಾಖೆ ಹೇಳಿದೆ.