ವಿಶ್ವಬ್ಯಾಂಕ್ ಯೋಜನೆಯಡಿ ಉಕ್ರೇನ್‍ಗೆ 1.5 ಶತಕೋಟಿ ಡಾಲರ್ ನಿಧಿ

Update: 2024-03-30 15:36 GMT

ಕೀವ್ : ವಿಶ್ವಬ್ಯಾಂಕ್‍ನ ಕಾರ್ಯಕ್ರಮದಡಿ ಉಕ್ರೇನ್ 1.5 ಶತಕೋಟಿ ಡಾಲರ್ ನೆರವು ದೊರೆತಿದ್ದು ಇದು ರಶ್ಯದ ಆಕ್ರಮಣದ ವಿರುದ್ಧ ಸ್ವರಕ್ಷಣೆಗೆ ನೆರವಾಗಲಿದೆ ಎಂದು ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ಶುಕ್ರವಾರ ಹೇಳಿದ್ದಾರೆ.

ರಶ್ಯದ ವಿರುದ್ಧದ ಹೋರಾಟಕ್ಕೆ ಉಕ್ರೇನ್ ತನ್ನ ಪಾಶ್ಚಿಮಾತ್ಯ ಮಿತ್ರರು ಹಾಗೂ ಅಮೆರಿಕದ ಆರ್ಥಿಕ ನೆರವನ್ನು ಅವಲಂಬಿಸಿದೆ. ಆದರೆ ಈ ವರ್ಷದ ಆರಂಭದ 2 ತಿಂಗಳು ವಿದೇಶಿ ನೆರವು ಕಡಿಮೆಯಾಗಿದೆ ಮತ್ತು ಅಮೆರಿಕದ ನೆರವಿನ ಪ್ಯಾಕೇಜ್ ಅನ್ನು ಸಂಸತ್‍ನಲ್ಲಿ ರಿಪಬ್ಲಿಕನ್ ಸದಸ್ಯರು ತಡೆ ಹಿಡಿದಿದ್ದಾರೆ.

ಮಾರ್ಚ್‍ನಲ್ಲಿ ಉಕ್ರೇನ್ ಸುಮಾರು 9 ಶತಕೋಟಿ ಡಾಲರ್ ಆರ್ಥಿಕ ನೆರವನ್ನು ವಿದೇಶಗಳಿಂದ ಪಡೆಯಲು ಶಕ್ತವಾಗಿದ್ದು ಯುರೋಪಿಯನ್ ಯೂನಿಯನ್, ಕೆನಡಾ, ಜಪಾನ್, ಬ್ರಿಟನ್ ಮತ್ತು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಆರ್ಥಿಕ ನೆರವು ನೀಡಿದವರಲ್ಲಿ ಪ್ರಮುಖರಾಗಿದ್ದಾರೆ ಎಂದು ಉಕ್ರೇನ್‍ನ ವಿತ್ತ ಸಚಿವಾಲಯ ಹೇಳಿದೆ.

ವಿಶ್ವಬ್ಯಾಂಕ್‍ನ ಹೊಸ ನೆರವಿನಲ್ಲಿ 984 ದಶಲಕ್ಷ ಡಾಲರ್ ಜಪಾನ್‍ನಿಂದ ಮತ್ತು 516 ದಶಲಕ್ಷ ಡಾಲರ್ ಬ್ರಿಟನ್‍ನಿಂದ ದೊರೆಯುತ್ತದೆ. ಈ ನಿಧಿಯನ್ನು ಸಾಮಾಜಿಕ ಮತ್ತು ಮಾನವೀಯ ಅಗತ್ಯಗಳು ಹಾಗೂ ಮರುನಿರ್ಮಾಣ ವೆಚ್ಚಕ್ಕೆ ವಿನಿಯೋಗಿಸಲಾಗುವುದು ಎಂದು ಪ್ರಧಾನಿ ಮಾಹಿತಿ ನೀಡಿದ್ದಾರೆ. ಮಾರ್ಚ್ ಆರಂಭದಲ್ಲಿ ಯುರೋಪಿಯನ್ ಯೂನಿಯನ್ ಬ್ರಿಜಿಂಗ್ ಫೈನಾನ್ಸ್ ಕಾರ್ಯಕ್ರಮದಡಿ ಉಕ್ರೇನ್ 4.9 ಶತಕೋಟಿ ಡಾಲರ್ ನೆರವು ಪಡೆದಿದೆ. ಉಕ್ರೇನ್‍ನ ಆದಾಯದಲ್ಲಿ ಬಹುತೇಕ ಪಾಲು ರಶ್ಯ ವಿರುದ್ಧದ ಹೋರಾಟಕ್ಕೆ ಬಳಕೆಯಾಗುತ್ತಿರುವುದರಿಂದ ಉಕ್ರೇನ್ ತನ್ನ ಸಾಮಾಜಿಕ ಯೋಜನೆಗೆ ವಿದೇಶದ ಆರ್ಥಿಕ ನೆರವನ್ನು ಅವಲಂಬಿಸುವಂತಾಗಿದೆ. 2024ರಲ್ಲಿ ವಿದೇಶದ ಆರ್ಥಿಕ ನೆರವು 10.2 ಶತಕೋಟಿ ಡಾಲರ್ ಗೆ ತಲುಪಿದೆ. ಪೂರ್ಣಪ್ರಮಾಣದ ಯುದ್ಧ ಆರಂಭಗೊಂಡಂದಿನಿಂದ ವಿದೇಶದಿಂದ 83.8 ಶತಕೋಟಿ ಡಾಲರ್ ಆರ್ಥಿಕ ನೆರವು ಪಡೆಯಲಾಗಿದೆ ಎಂದು ವಿತ್ತ ಸಚಿವಾಲಯ ಹೇಳಿದೆ. 

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News