ಮಾಸ್ಕೋ ಮೇಲೆ ಡ್ರೋನ್ ಸುರಿಮಳೆಗರೆದ ಉಕ್ರೇನ್
ಮಾಸ್ಕೋ : ರಶ್ಯ ರಾಜಧಾನಿ ಮಾಸ್ಕೋದ ಮೇಲೆ ಉಕ್ರೇನ್ ಬುಧವಾರ ಡ್ರೋನ್‍ಗಳ ಸುರಿಮಳೆಗರೆದಿದೆ. ಇದರಲ್ಲಿ 11 ಡ್ರೋನ್‍ಗಳನ್ನು ರಶ್ಯದ ವಾಯುರಕ್ಷಣಾ ವ್ಯವಸ್ಥೆ ನಾಶಗೊಳಿಸಿದೆ ಎಂದು ಮಾಸ್ಕೋ ನಗರದ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ಹೇಳಿದ್ದಾರೆ.
ಮಾಸ್ಕೋದ ನೆರೆಯ ನಗರ ಪೊಡೊಲ್ಸ್ಕ್ ನಗರದತ್ತ ಧಾವಿಸುತ್ತಿದ್ದ ಹಲವು ಡ್ರೋನ್‍ಗಳನ್ನು ನಾಶಗೊಳಿಸಲಾಗಿದೆ. ಯುದ್ಧ ಆರಂಭಗೊಂಡ ಬಳಿಕ ರಶ್ಯದ ಪ್ರದೇಶದ ಮೇಲೆ ಉಕ್ರೇನ್ ನಡೆಸಿದ ಅತೀ ದೊಡ್ಡ ಡ್ರೋನ್ ದಾಳಿ ಇದಾಗಿದೆ ಎಂದವರು ಹೇಳಿದ್ದಾರೆ.
ಉಕ್ರೇನ್ ಗಡಿ ಸನಿಹದಲ್ಲಿರುವ ಬ್ರಿಯಾನ್ಸ್ಕ್ ನಗರದ ಮೇಲೆ ಹಾರುತ್ತಿದ್ದ 23 ಡ್ರೋನ್‍ಗಳನ್ನೂ ಹೊಡೆದುರುಳಿಸಲಾಗಿದೆ. ಗಡಿಭಾಗದ ಮತ್ತೊಂದು ನಗರ ಬೆಲ್‍ಗೊರೊಡ್ ಪ್ರದೇಶದಲ್ಲಿ 6, ಈಶಾನ್ಯದ ಕಲೂಗಾ ವಲಯದಲ್ಲಿ 3, ಕಸ್ರ್ಕ್ ವಲಯದಲ್ಲಿ 2 ಡ್ರೋನ್‍ಗಳನ್ನು ಹೊಡೆದುರುಳಿಸಲಾಗಿದೆ. ಡ್ರೋನ್ ದಾಳಿಯಲ್ಲಿ ಯಾವುದೇ ಸಾವು-ನೋವು ಅಥವಾ ನಾಶ , ನಷ್ಟದ ವರದಿಯಾಗಿಲ್ಲ ಎಂದು ಬ್ರಿಯಾನ್ಸ್ಕ್ ಪ್ರಾಂತದ ಗವರ್ನರ್ ಅಲೆಕ್ಸಾಂಡರ್ ಬೊಗೊಮಾಝ್‍ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಮಾಸ್ಕೋದ ಉತ್ತರದಲ್ಲಿರುವ ಟುಲಾ ಪ್ರಾಂತದಲ್ಲಿ ಎರಡು ಡ್ರೋನ್‍ಗಳನ್ನು ಮತ್ತು ಉಕ್ರೇನ್ ಪ್ರಯೋಗಿಸಿದ ಕ್ಷಿಪಣಿಯನ್ನು ಹೊಡೆದುರುಳಿಸಲಾಗಿದೆ ಎಂದು ರೊಸ್ತೋವ್ ವಲಯದ ಗವರ್ನರ್ ವ್ಯಾಸಿಲಿ ಗೊಲುಬೆವ್ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಶ್ಯನ್ ಪ್ರಾಂತವನ್ನು ಗುರಿಯಾಗಿಸಿ ವಾಯು ದಾಳಿಗಳನ್ನು ಹೆಚ್ಚಿಸಿರುವ ಉಕ್ರೇನ್, ರಶ್ಯದ ಯುದ್ಧ ಪ್ರಯತ್ನಗಳಿಗೆ ಮುಖ್ಯವಾಗಿರುವ ಮೂಲಸೌಕರ್ಯಗಳನ್ನು ನಾಶಗೊಳಿಸುವುದು ತನ್ನ ಗುರಿಯಾಗಿದೆ. ಜತೆಗೆ, ಉಕ್ರೇನ್ ಪ್ರಾಂತದ ಮೇಲೆ ಮುಂದುವರಿದಿರುವ ರಶ್ಯದ ದಾಳಿಗೆ ಇದು ಪ್ರತಿಕ್ರಮವಾಗಿದೆ ಎಂದು ಹೇಳಿದೆ. ಈ ಮಧ್ಯೆ, ರಶ್ಯದ ಕಸ್ರ್ಕ್ ವಲಯದೊಳಗೆ ನುಗ್ಗಿರುವ ಉಕ್ರೇನ್ ಪಡೆಯನ್ನು ಹೊರದಬ್ಬಲು ಹೆಣಗುತ್ತಿರುವ ರಶ್ಯದ ಸೇನೆ ಪೂರ್ವ ಉಕ್ರೇನ್‍ನಲ್ಲಿ ನಿರಂತರ ಮುನ್ನಡೆ ಸಾಧಿಸಿರುವುದಾಗಿ ವರದಿಯಾಗಿದೆ.