ಸುನಕ್ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ನಿರ್ಧಾರ
ಲಂಡನ್: ಸ್ಥಳೀಯ ಚುನಾವಣೆಗಳಲ್ಲಿ ಆಡಳಿತಾರೂಢ ಪಕ್ಷಕ್ಕೆ ಆಗಿರುವ ಹಿನ್ನಡೆಯ ಕಾರಣ ತಕ್ಷಣ ಸಾರ್ವತ್ರಿಕ ಚುನಾವಣೆಗೆ ಆಗ್ರಹಿಸಿ ಪ್ರಧಾನಿ ರಿಷಿ ಸುನಾಕ್ ಸರಕಾರದ ವಿರುದ್ಧ ಸಂಸತ್‍ನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಲಿಬರಲ್ ಡೆಮೊಕ್ರೆಟಿಕ್ ಪಕ್ಷ ಸೋಮವಾರ ಹೇಳಿದೆ.
ಕಳೆದ ವಾರ ನಡೆದ ಸ್ಥಳೀಯ ಸಮಿತಿ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ 474 ಸ್ಥಾನಗಳನ್ನು ಕಳೆದುಕೊಂಡಿದ್ದರೆ ಪ್ರಮುಖ ವಿರೋಧ ಪಕ್ಷ ಲೇಬರ್ ಪಾರ್ಟಿ 186 ಮತ್ತು ಲಿಬರಲ್ ಡೆಮೊಕ್ರಾಟ್ 104 ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದಿತ್ತು. `ಜನತೆ ಸುನಾಕ್ ಹಾಗೂ ಅವರ ಸರಕಾರದ ಬಗ್ಗೆ ಭ್ರಮನಿರಸನಗೊಂಡಿರುವುದನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಸಾಬೀತುಪಡಿಸಿದೆ. ಆದ್ದರಿಂದ ಸುನಾಕ್ ತಕ್ಷಣ ರಾಜೀನಾಮೆ ನೀಡಿ ಜೂನ್‍ನಲ್ಲಿ ಸಾರ್ವತ್ರಿಕ ಚುನಾವಣೆಗೆ ಅನುವು ಮಾಡಿಕೊಡಬೇಕು' ಎಂದು ಲಿಬರಲ್ ಡೆಮೊಕ್ರಟಿಕ್ ಪಕ್ಷದ ಮುಖಂಡ ಎಡ್ ಡೇವಿ ಆಗ್ರಹಿಸಿದ್ದಾರೆ.
ಸಂಸತ್‍ನ ಕೆಳಮನೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷಕ್ಕೆ ಬಹುಮತವಿರುವುದರಿಂದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗುವುದು ಬಹುತೇಕ ಖಚಿತವಾಗಿದೆ.