ಗಾಝಾದಲ್ಲಿ ಮಾನವೀಯ ಕದನ ವಿರಾಮಕ್ಕೆ ವಿಶ್ವಸಂಸ್ಥೆ ಆಗ್ರಹ

Update: 2024-08-24 14:03 GMT

PC : un.org

ವಿಶ್ವಸಂಸ್ಥೆ: ಗಾಝಾದಲ್ಲಿ 10 ತಿಂಗಳ ವಯಸ್ಸಿನ ಲಸಿಕೆ ಹಾಕದ ಮಗುವಿಗೆ ಪೋಲಿಯೊ ಇದೆ ಮತ್ತು ಭಾಗಶಃ ಪಾಶ್ರ್ವವಾಯುವಿಗೆ ಒಳಗಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ದೃಢೀಕರಿಸಿದ ಹಿನ್ನೆಲೆಯಲ್ಲಿ, 6 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲು ಅನುಕೂಲವಾಗುವಂತೆ ಗಾಝಾದಲ್ಲಿ ಹೋರಾಟಕ್ಕೆ ಮಾನವೀಯ ವಿರಾಮವನ್ನು ವಿಶ್ವಸಂಸ್ಥೆ ಆಗ್ರಹಿಸಿದೆ.

ಇದು 25 ವರ್ಷದಲ್ಲಿ ಗಾಝಾದಲ್ಲಿ ಮೊದಲ ಅಂತರಾಷ್ಟ್ರೀಯವಾಗಿ ದೃಢಪಟ್ಟ ಪೋಲಿಯೊ ಪ್ರಕರಣವಾಗಿದೆ. ಡೀರ್-ಅಲ್ ಬಲಾಹ್‍ನಲ್ಲಿರುವ ಮಗುವಿಗೆ ಎಡಕಾಲಿನ ಕೆಳಭಾಗದಲ್ಲಿ ಪಾಶ್ರ್ವವಾಯು ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರಾಸ್ ಅಧನಾಮ್ ಘೆಬ್ರಯೇಸಸ್ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಗಾಝಾದ ಆರೋಗ್ಯ ಸಚಿವಾಲಯವೂ ಪ್ರಕರಣವನ್ನು ದೃಢಪಡಿಸಿದೆ.

ಆಗಸ್ಟ್ ಅಂತ್ಯದಲ್ಲಿ ಮತ್ತು ಸೆಪ್ಟಂಬರ್ ನಲ್ಲಿ ಎರಡು ಸುತ್ತಿನ ಪೋಲಿಯೊ ಲಸಿಕಾ ಅಭಿಯಾನ ಗಾಝಾ ಪಟ್ಟಿಯಾದ್ಯಂತ ಆರಂಭವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಗಾಝಾದಲ್ಲಿ ನಾಲ್ಕು ವಾರಗಳ ಅಂತರದಲ್ಲಿ ಎರಡು ಸುತ್ತಿನ ಪೋಲಿಯೊ ಲಸಿಕೆಯನ್ನು ಅಳವಡಿಸಲು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಏಜೆನ್ಸಿ ಯುನಿಸೆಫ್ ಗಾಝಾದ ಆರೋಗ್ಯ ಇಲಾಖೆಯೊಂದಿಗೆ ಕೆಲಸ ಮಾಡುತ್ತಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಕಚೇರಿ ಹೇಳಿದೆ. ಇಸ್ರೇಲ್, ಹಮಾಸ್ ಹಾಗೂ ಗಾಝಾದಲ್ಲಿನ ಇತರ ಗುಂಪುಗಳು ಮಾನವೀಯ ವಿರಾಮಗಳ ಒಪ್ಪಂದಕ್ಕೆ ಸಮ್ಮತಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಾತುಕತೆ ಮುಂದುವರಿದಿದೆ. ಲಸಿಕೆಗಳನ್ನು ತಂಪಾಗಿಸಲು ಹಲವಾರು `ರೆಫ್ರಿಜರೇಟರ್' ವ್ಯವಸ್ಥೆಯುಳ್ಳ ಟ್ರಕ್‍ಗಳು ಗಾಝಾಕ್ಕೆ ಆಗಮಿಸಿವೆ. ಆದರೆ ಲಸಿಕೆಗಳನ್ನು ಇದುವರೆಗೆ ವಿತರಿಸಲಾಗಿಲ್ಲ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡ್ಯುಜರಿಕ್ ಹೇಳಿದ್ದಾರೆ.

ಈ ಮಧ್ಯೆ, ಗಾಝಾದಿಂದ ಸ್ಥಳಾಂತರಗೊಳ್ಳುವಂತೆ ಬುಧವಾರ ಮತ್ತು ಗುರುವಾರ ಇಸ್ರೇಲ್ ನೀಡಿದ ಆದೇಶವು ಡೀರ್ ಅಲ್-ಬಲಾಹ್ ಮತ್ತು ದಕ್ಷಿಣದ ಖಾನ್ ಯೂನಿಸ್ ನಗರ ಹಾಗೂ ಸುತ್ತಮುತ್ತಲಿನ 15 ಪ್ರದೇಶಗಳ ಫೆಲೆಸ್ತೀನೀಯರ ಮೇಲೆ ಪರಿಣಾಮ ಬೀರಿದೆ ಎಂದು ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿನ ವಿಶ್ವಸಂಸ್ಥೆಯ ಇಲಾಖೆ `ಒಸಿಎಚ್‍ಎ' ಹೇಳಿದೆ.

ಇಸ್ರೇಲ್ ಆಗಸ್ಟ್ ತಿಂಗಳಲ್ಲೇ 13 ಸ್ಥಳಾಂತರ ಆದೇಶಗಳನ್ನು ಹೊರಡಿಸಿದೆ. ಅಕ್ಟೋಬರ್ ನಲ್ಲಿ ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದಾಗಿನಿಂದ ಗಾಝಾದಿಂದ ಸ್ಥಳಾಂತರಗೊಳ್ಳಲು ಸೂಚಿಸುವ ಇಸ್ರೇಲ್‍ನ ಸತತ ಆದೇಶವು ಗಾಝಾದ 2.1 ದಶಲಕ್ಷ ನಿವಾಸಿಗಳಲ್ಲಿ 90%ದಷ್ಟು ಜನರನ್ನು ಸ್ಥಳಾಂತರಗೊಳಿಸಲು ಕಾರಣವಾಗಿದೆ ಎಂದು ಒಸಿಎಚ್‍ಎ ಹೇಳಿದೆ.

ಟೈಪ್ 2 ಪೋಲಿಯೊ ಪ್ರಕರಣ:

ಯುದ್ಧದಿಂದ ಜರ್ಝರಿತಗೊಂಡಿರುವ ಗಾಝಾದಲ್ಲಿ 10 ತಿಂಗಳ ಮಗು ಟೈಪ್ 2 ಪೋಲಿಯೊದಿಂದ ಪಾಶ್ರ್ವವಾಯುವಿಗೆ ತುತ್ತಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು ಗಾಝಾದಲ್ಲಿ ಎಲ್ಲಾ ಶಿಶುಗಳಿಗೂ ತಕ್ಷಣ ಲಸಿಕೆ ಹಾಕುವುದು ಅತ್ಯಗತ್ಯವಾಗಿದೆ ಎಂದಿದೆ.

ಕೆಳ ಎಡಗಾಲಿನಲ್ಲಿ ಚಲನವಲನ ಕಳೆದುಕೊಂಡಿರುವ ಮಗುವಿನ ಸ್ಥಿತಿ ಸ್ಥಿರವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಘೆಬ್ರಯೇಸಸ್ ಹೇಳಿದ್ದಾರೆ.

ಟೈಪ್ 2 ಸೋಂಕು(ಸಿವಿಡಿಪಿವಿ2) 1 ಮತ್ತು 2 ಟೈಪ್‍ಗಳಿಗಿಂತ ಅಂತರ್ಗತವಾಗಿ ಹೆಚ್ಚು ಅಪಾಯಕಾರಿಯಲ್ಲದಿದ್ದರೂ, ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ ಕಡಿಮೆ ವ್ಯಾಕ್ಸಿನೇಷನ್(ಲಸಿಕೆ) ದರಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಏಕಾಏಕಿ ಉಲ್ಬಣಕ್ಕೆ ಕಾರಣವಾಗುತ್ತಿದೆ.

ಗಾಝಾ ಪ್ರಾಂತದಲ್ಲಿ ಲಸಿಕಾ ಅಭಿಯಾನ ಮುಂದುವರಿಯಲು ಅನುಕೂಲವಾಗುವಂತೆ ಯುದ್ಧಕ್ಕೆ 7 ದಿನಗಳ ಮಾನವೀಯ ವಿರಾಮ ನೀಡಲು ಸಮ್ಮತಿಸುವಂತೆ ಇಸ್ರೇಲ್ ಮತ್ತು ಹಮಾಸ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ ಆಗ್ರಹಿಸಿದೆ. `ಪೋಲಿಯೊಗೆ ಫೆಲಸ್ತೀನಿಯನ್ ಮಕ್ಕಳು ಅಥವಾ ಇಸ್ರೇಲ್ ಮಕ್ಕಳು ಎಂಬ ವ್ಯತ್ಯಾಸವಿಲ್ಲ. ಮಾನವೀಯ ವಿರಾಮ ವಿಳಂಬವಾದಷ್ಟೂ ಮಕ್ಕಳಲ್ಲಿ ಹರಡುವ ಅಪಾಯ ಹೆಚ್ಚುತ್ತದೆ ಎಂದು ಫೆಲೆಸ್ತೀನಿಯನ್ ನಿರಾಶ್ರಿತರಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಏಜೆನ್ಸಿ `ಯುಎನ್‍ಆರ್‍ಡಬ್ಲ್ಯೂಎ'ದ ಮುಖ್ಯಸ್ಥ ಫಿಲಿಪ್ ಲಝಾರಿನಿ ಹೇಳಿದ್ದಾರೆ.

ಕೈರೊಗೆ ನಿಯೋಗ ಕಳುಹಿಸುತ್ತೇವೆ, ಆದರೆ ಮಾತುಕತೆಯಲ್ಲಿ ಪಾಲ್ಗೊಳ್ಳುವುದಿಲ್ಲ: ಹಮಾಸ್

ಈಜಿಪ್ಟ್ ರಾಜಧಾನಿ ಕೈರೋಗೆ ತನ್ನ ನಿಯೋಗವನ್ನು ಕಳುಹಿಸುತ್ತೇವೆ. ಆದರೆ ಕದನ ವಿರಾಮ ಮಾತುಕತೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹಮಾಸ್ ಹೇಳಿದೆ.

ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಸುಮಾರು 10 ತಿಂಗಳಿಂದ ಮುಂದುವರಿದಿರುವ ಯುದ್ಧವನ್ನು ಅಂತ್ಯಗೊಳಿಸುವ ಒಪ್ಪಂದ ಅಂತಿಮಗೊಳಿಸಲು ಈಜಿಪ್ಟ್, ಖತರ್ ಮತ್ತು ಅಮೆರಿಕ ಪ್ರಯತ್ನಿಸುತ್ತಿದೆ. `ಕೈರೋದಲ್ಲಿ ಈಜಿಪ್ಟ್ ನ ಹಿರಿಯ ಗುಪ್ತಚರ ಅಧಿಕಾರಿಗಳನ್ನು ನಿಯೋಗ ಭೇಟಿಯಾಗಲಿದ್ದು ಗಾಝಾ ಕದನವಿರಾಮ ಮಾತುಕತೆಯ ಬಗ್ಗೆ ಮಾಹಿತಿ ಪಡೆಯಲಿದೆ. ಆದರೆ ನಿಯೋಗ ಮಾತುಕತೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಈ ಸುತ್ತಿನ ಮಾತುಕತೆಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ ಎಂದು ಆರಂಭದಲ್ಲೇ ದೃಢಪಡಿಸಿದ್ದೇವೆ. ಫಿಲಡೆಲ್ಫಿ ಕಾರಿಡಾರ್ ಸೇರಿದಂತೆ ಗಾಝಾದಿಂದ ಇಸ್ರೇಲ್ ತನ್ನ ಪಡೆಗಳನ್ನು ಹಿಂಪಡೆಯಬೇಕು ಎಂಬ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಹಮಾಸ್‍ನ ಉನ್ನತ ನಾಯಕರನ್ನು ಉಲ್ಲೇಖಿಸಿ ಎಎಫ್‍ಪಿ ವರದಿ ಮಾಡಿದೆ. ಕೈರೋದಲ್ಲಿ ನಡೆಯುವ ಮಾತುಕತೆಯಲ್ಲಿ ಸಿಐಎ ಮುಖ್ಯಸ್ಥ ವಿಲಿಯಂ ಬನ್ರ್ಸ್ ಪಾಲ್ಗೊಳ್ಳಲಿದ್ದಾರೆ ಎಂದು ಶ್ವೇತಭವನ ಹೇಳಿದೆ. ಇಸ್ರೇಲ್ ತನ್ನ ಗುಪ್ತಚರ ಮತ್ತು ಭದ್ರತಾ ಸೇವೆಯ ಮುಖ್ಯಸ್ಥರ ಸಹಿತ ಉನ್ನತ ಮಟ್ಟದ ನಿಯೋಗವನ್ನು ಕಳುಹಿಸಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News