ಗಾಝಾದಲ್ಲಿ ಶಾಶ್ವತ ಕದನ ವಿರಾಮಕ್ಕೆ ವಿಶ್ವಸಂಸ್ಥೆ ಕರೆ
Update: 2024-09-04 17:01 GMT
ಗಾಝಾ : ಗಾಝಾ ಪ್ರದೇಶದ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಅಭಿಯಾನ ಯಶಸ್ವಿಯಾಗಿ ಮುಂದುವರಿದಿದೆ ಎಂದು ವಿಶ್ವಸಂಸ್ಥೆ ಬುಧವಾರ ಹೇಳಿದ್ದು ಗಾಝಾದಲ್ಲಿ ಪರಿಸ್ಥಿತಿ ಸುಧಾರಿಸಲು ಶಾಶ್ವತ ಕದನ ವಿರಾಮದ ಅಗತ್ಯವಿದೆ ಎಂದು ಹೇಳಿದೆ.
ಮಧ್ಯ ಗಾಝಾದ ಪ್ರದೇಶದಲ್ಲಿ ಮೂರು ದಿನಗಳ ಅಭಿಯಾನದಲ್ಲಿ ಸುಮಾರು 1,87,000 ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲಾಗಿದೆ. ಎರಡನೇ ಹಂತದಲ್ಲಿ ಅಭಿಯಾನವನ್ನು ಫೆಲೆಸ್ತೀನ್ ನ ಪ್ರದೇಶದ ಇತರ ಸ್ಥಳಗಳಿಗೆ ವಿಸ್ತರಿಸಲಾಗುವುದು. ಪೋಲಿಯೊ ಲಸಿಕೆ ಹಾಕಿಸಲು ಸಂಘರ್ಷಕ್ಕೆ ಮಾನವೀಯ ವಿರಾಮ ನೀಡಿರುವುದರಿಂದ ಜನ ಸ್ವಲ್ಪ ನಿರಾಳಗೊಂಡರೂ ಈಗ ಶಾಶ್ವತ ಕದನ ವಿರಾಮ, ಎಲ್ಲಾ ಒತ್ತೆಯಾಳುಗಳ ಬಿಡುಗಡೆ ಮತ್ತು ಮಾನವೀಯ ನೆರವನ್ನು ಒದಗಿಸಲು ಅವಕಾಶ ಮಾಡಿಕೊಡುವ ತುರ್ತು ಅಗತ್ಯವಿದೆ ಎಂದು ಫೆಲೆಸ್ತೀನ್ ಪ್ರದೇಶಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆ ಏಜೆನ್ಸಿ `ಯುಎನ್‍ಆರ್‍ಡಬ್ಲ್ಯೂಎ'ದ ಮುಖ್ಯಸ್ಥ ಫಿಲಿಪ್ ಲಾಝರಿನಿ ಬುಧವಾರ ಆಗ್ರಹಿಸಿದ್ದಾರೆ.