ಗಾಝಾದಲ್ಲಿ ಕದನ ವಿರಾಮಕ್ಕೆ ಆಗ್ರಹಿಸುವ ನಿರ್ಣಯಕ್ಕೆ ವಿಶ್ವಸಂಸ್ಥೆ ಸಾಮಾನ್ಯಸಭೆ ಅಸ್ತು

Update: 2023-12-13 02:48 GMT

Photo: PTI

ವಿಶ್ವಸಂಸ್ಥೆ: ಗಾಝಾದಲ್ಲಿ ಎರಡು ತಿಂಗಳಿನಿಂದ ನಡೆಯುತ್ತಿರುವ ಹಮಾಸ್- ಇಸ್ರೇಲ್ ಯುದ್ಧ ಅಂತ್ಯವಾಗಬೇಕು ಎಂಬ ನಿಲುವಿಗೆ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಗಾಝಾದಲ್ಲಿ ಮಾನವೀಯತೆಯ ಆಧಾರದಲ್ಲಿ ತಕ್ಷಣವೇ ಕದನ ವಿರಾಮ ಘೋಷಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಮಂಗಳವಾರ ವಿಶ್ವಸಂಸ್ಥೆ ಆಂಗೀಕರಿಸಿದ್ದು, ಈ ವಿಚಾರದಲ್ಲಿ ಅಮೆರಿಕ ಹಾಗೂ ಇಸ್ರೇಲ್ ಪರ ಕನಿಷ್ಠ ಮತ ಚಲಾವಣೆಯಾಗಿರುವುದು ವಿಶೇಷ.

193 ಸದಸ್ಯರ ಸಾಮಾನ್ಯಸಭೆಯಲ್ಲಿ 153 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ ಕೇವಲ 10 ದೇಶಗಳು ಮಾತ್ರ ವಿರುದ್ಧವಾಗಿ ಮತ ಚಲಾಯಿಸಿದವು. 23 ದೇಶಗಳು ಮತದಾನದಿಂದ ಹೊರಗುಳಿದವು. ನಿರ್ಣಯವನ್ನು ವಿರೋಧಿಸಿದ ಅಮೆರಿಕ, ಇಸ್ರೇಲ್ ಜತೆಗೆ ಆಸ್ಟ್ರಿಯಾ, ಝೆಕ್ಚಿಯಾ, ಗ್ವಾಟೆಮಾಲಾ, ಲೈಬೀರಿಯಾ, ಮೈಕ್ರೋನ್ಸಿಯಾ, ನೌರು, ಪಪೂವಾ ನ್ಯೂ ಗ್ಯುನಿಯಾ ಮತ್ತು ಪರಗ್ವೆ ಮಾತ್ರ ನಿಂತವು.

ಮಾನವೀಯತೆ ಆಧಾರದಲ್ಲಿ ಕದನ ವಿರಾಮ ಘೋಷಿಸಬೇಕು ಎಂದು ಅಕ್ಟೋಬರ್ 27ರಂದು ಮಂಡಿಸಿದ್ದ ನಿರ್ಣಯಕ್ಕೆ ವ್ಯಕ್ತವಾದಕ್ಕಿಂತ ಹೆಚ್ಚಿನ ಬೆಂಬಲ ಮಂಗಳವಾರದ ನಿರ್ಣಯಕ್ಕೆ ವ್ಯಕ್ತವಾಗಿದೆ. ಅಕ್ಟೋಬರ್ 27ಕ್ಕೆ ನಡೆದ ಮತದಾನದಲ್ಲಿ 120-14 ಮತಗಳಿಂದ ನಿರ್ಣಯ ಆಂಗೀಕಾರವಾಗಿತ್ತು. 45 ದೇಶಗಳು ಮತದಾನದಿಂದ ಹೊರಗೆ ಉಳಿದಿದ್ದವು.

ಭದ್ರತಾ ಮಂಡಳಿ ಸಭೆಯಲ್ಲಿ ಇಂಥದ್ದೇ ನಿರ್ಣಯಕ್ಕೆ ಅಮೆರಿಕ ವಿಟೊ ಚಲಾಯಿಸಿತ್ತು. ಈ ಹಿನ್ನೆಲೆಯಲ್ಲಿ ಇಂಥದ್ದೇ ನಿರ್ಣಯ ಮಂಡಿಸಲು ಅರಬ್ ಮತ್ತು ಇಸ್ಲಾಮಿಕ್ ದೇಶಗಳು 193 ಸದಸ್ಯರ ಸಾಮಾನ್ಯ ಸಭೆಯ ತುರ್ತು ಅಧಿವೇಶನಕ್ಕೆ ಆಗ್ರಹಿಸಿದ್ದವು. ಆದರೆ ಭದ್ರತಾ ಮಂಡಳಿಯ ನಿರ್ಣಯದಂತೆ ಸಾಮಾನ್ಯಸಭೆಯ ನಿರ್ಣಯಕ್ಕೆ ಯಾವುದೇ ಕಾನೂನಾತ್ಮಕ ಬದ್ಧತೆ ಇರುವುದಿಲ್ಲ. ಆದಾಗ್ಯೂ ಸಾಮಾನ್ಯಸಭೆಯ ಸಂದೇಶ ಅತ್ಯಂತ ಮಹತ್ವದ್ದು ಹಾಗೂ ವಿಶ್ವದ ಅಭಿಪ್ರಾಯವನ್ನು ಬಿಂಬಿಸುವಂಥದ್ದು ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡ್ಯುಜರಿಕ್ ಹೇಳಿದ್ದಾರೆ.

ಈ ನಿರ್ಣಯ ಅಮೆರಿಕ ಹಾಗೂ ಇಸ್ರೇಲ್ ವಿಶ್ವಮಟ್ಟದಲ್ಲಿ ಬೆಂಬಲ ಕಳೆದುಕೊಳ್ಳುತ್ತಿದೆ ಎನ್ನುವ ಸಂದೇಶವನ್ನು ರವಾನಿಸುವಂಥದ್ದು ಎಂದು ಪ್ಯಾಲೆಸ್ತೀನ್ ರಾಯಭಾರಿ ರಿಯಾದ್ ಮನ್ಸೂರ್ ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News