ಇಸ್ರೇಲ್ ಆಕ್ರಮಣದ ವಿರುದ್ಧ ದೇಶಗಳು ಒಗ್ಗೂಡಬೇಕು : ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥರ ಆಗ್ರಹ

Update: 2024-09-09 16:10 GMT

ವಿಶ್ವಸಂಸ್ಥೆ (Photo: Bloomberg)

ಜಿನೆವಾ : ಸುಮಾರು 1 ವರ್ಷದಿಂದ ಮುಂದುವರಿದಿರುವ ಗಾಝಾ ಯುದ್ಧವನ್ನು ಅಂತ್ಯಗೊಳಿಸುವುದು ನಮ್ಮ ಆದ್ಯತೆಯಾಗಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥರು ಸೋಮವಾರ ಹೇಳಿದ್ದು ಆಕ್ರಮಿತ ಫೆಲಸ್ತೀನ್ ಪ್ರಾಂತಗಳಲ್ಲಿ ಇಸ್ರೇಲ್‍ನಿಂದ ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯ ವಿರುದ್ಧ ಎಲ್ಲಾ ದೇಶಗಳೂ ಒಕ್ಕೊರಲಿನ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ.

2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಸಶಸ್ತ್ರ ಹೋರಾಟಗಾರರ ಗುಂಪು ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಆಕ್ರಮಣದಲ್ಲಿ ಸುಮಾರು 50,000 ಫೆಲೆಸ್ತೀನೀಯರು ಮೃತಪಟ್ಟಿರುವುದಾಗಿ ಗಾಝಾ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

`ಈ ಯುದ್ಧವನ್ನು ಕೊನೆಗೊಳಿಸುವುದು ಮತ್ತು ಪೂರ್ಣ ಪ್ರಮಾಣದ ಪ್ರಾದೇಶಿಕ ಸಂಘರ್ಷ ಉಲ್ಬಣಗೊಳ್ಳುವುದನ್ನು ತಪ್ಪಿಸುವುದು ಸಂಪೂರ್ಣ ಮತ್ತು ತುರ್ತು ಆದ್ಯತೆಯಾಗಿದೆ ಎಂದು ಜಿನೆವಾದಲ್ಲಿ ಆರಂಭಗೊಂಡ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿ ಸಭೆಯಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ(ಗಾಝಾ ಆಕ್ರಮಣ) ಅಥವಾ ಇನ್ಯಾವುದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯ(ಐಸಿಜೆ), ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯ ಸೇರಿದಂತೆ ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಗೆ ದೇಶಗಳು ಸಮ್ಮತಿಸಬಾರದು. ಫೆಲೆಸ್ತೀನ್ ಪ್ರದೇಶವನ್ನು ಇಸ್ರೇಲ್ ಆಕ್ರಮಿಸಿಕೊಂಡಿರುವುದು ಕಾನೂನುಬಾಹಿರ ಎಂದು ಕಳೆದ ಜುಲೈಯಲ್ಲಿ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯ ಐಸಿಜೆ ನೀಡಿದ ಆದೇಶದ ಬಗ್ಗೆ ಸಮಗ್ರ ಕ್ರಮ ಕೈಗೊಳ್ಳಬೇಕು ಎಂದು ಟರ್ಕ್ ಆಗ್ರಹಿಸಿದ್ದಾರೆ. ಐಸಿಜೆಯ ತೀರ್ಪು ಪಕ್ಷಪಾತದಿಂದ ಕೂಡಿದ್ದು ಅದನ್ನು ತಿರಸ್ಕರಿಸುವುದಾಗಿ ಇಸ್ರೇಲ್ ಹೇಳಿತ್ತು.

ಪ್ರಪಂಚಾದ್ಯಂತ ಪ್ರತಿಯೊಂದು ಪ್ರದೇಶದಲ್ಲಿ, ಸಾರ್ವತ್ರಿಕ ಮಾನವ ಹಕ್ಕುಗಳನ್ನು ಕಡೆಗಣಿಸಿ ಅಧಿಕಾರವನ್ನು ಹಿಡಿಯಲು ಅಥವಾ ಅಧಿಕಾರಕ್ಕೆ ಅಂಟಿಕೊಳ್ಳಲು ನಡೆಯುತ್ತಿರುವ ಶಕ್ತಿ ಪ್ರದರ್ಶನವನ್ನು ಕಾಣಬಹುದು. ಜಗತ್ತಿನಾದ್ಯಂತ ನಾಯಕತ್ವದ ಬಿಕ್ಕಟ್ಟಿನ ಸವಾಲು ಎದುರಾಗಿದೆ ಎಂದು ಟರ್ಕ್ ಹೇಳಿದ್ದಾರೆ.

ಐದು ವಾರಗಳ ಅಧಿವೇಶನದಲ್ಲಿ ಸುಡಾನ್‍ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ಅಫ್ಘಾನಿಸ್ತಾನ ಮತ್ತು ಉಕ್ರೇನ್‍ನಲ್ಲಿ ಮಾನವ ಹಕ್ಕುಗಳಿಗೆ ಎದುರಾಗಿರುವ ಸವಾಲಿನ ಬಗ್ಗೆ ಸದಸ್ಯ ದೇಶಗಳ ಪ್ರತಿನಿಧಿಗಳು ಚರ್ಚೆ ನಡೆಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News