ಲೆಬನಾನ್‍ನಲ್ಲಿ ಶಾಂತಿಪಾಲಕರ ಮೇಲಿನ ದಾಳಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಂಡನೆ : ನಾಗರಿಕರ ಸಾವು ನೋವಿಗೆ ಕಳವಳ

Update: 2024-11-14 14:52 GMT

PC : PTI

ನ್ಯೂಯಾರ್ಕ್ : ಇತ್ತೀಚಿನ ದಿನಗಳಲ್ಲಿ ದಕ್ಷಿಣ ಲೆಬನಾನ್‍ನಲ್ಲಿರುವ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಮೇಲೆ ನಡೆದಿರುವ ದಾಳಿಗಳನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ತೀವ್ರವಾಗಿ ಖಂಡಿಸಿದೆ.

ಈ ದಾಳಿಗಳಲ್ಲಿ ಶಾಂತಿಪಾಲನಾ ಪಡೆಯ ಹಲವರು ಗಾಯಗೊಂಡಿದ್ದಾರೆ. ಇಸ್ರೇಲ್-ಲೆಬನಾನ್ ಗಡಿಭಾಗದ ಬಳಿ ದಕ್ಷಿಣ ಲೆಬನಾನ್‍ನಲ್ಲಿ ಪರಿಸ್ಥಿತಿಯ ಮೇಲೆ ನಿಗಾ ಇಡಲು ವಿಶ್ವಸಂಸ್ಥೆ ಶಾಂತಿಪಾಲನಾ ಪಡೆ(ಯುಎನ್‍ಐಎಫ್‍ಐಎಲ್)ಯನ್ನು ನಿಯೋಜಿಸಿದೆ. ಗಡಿಭಾಗದ ಬಳಿ ಇಸ್ರೇಲ್ ಸೇನೆ ಹಾಗೂ ಹಿಜ್ಬುಲ್ಲಾ ಹೋರಾಟಗಾರರ ನಡುವೆ ಒಂದು ವರ್ಷದಿಂದ ನಡೆಯುತ್ತಿದ್ದ ಘರ್ಷಣೆ ಕಳೆದ ಒಂದು ತಿಂಗಳಿಂದ ತೀವ್ರ ಸಂಘರ್ಷಕ್ಕೆ ತಿರುಗಿದೆ.

ಇಸ್ರೇಲ್‍ನ ಹೆಸರು ಪ್ರಸ್ತಾವಿಸದೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳು `ಸಂಘರ್ಷದಲ್ಲಿ ತೊಡಗಿಕೊಂಡಿರುವ ಎಲ್ಲಾ ಪಕ್ಷಗಳೂ ಶಾಂತಿಪಾಲನಾ ಪಡೆಯ ಸಿಬ್ಬಂದಿಗಳು ಹಾಗೂ ವಿಶ್ವಸಂಸ್ಥೆಯ ಸೌಕರ್ಯಗಳ ಸುರಕ್ಷತೆ ಮತ್ತು ಭದ್ರತೆಯನ್ನು ಗೌರವಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಬೇಕು' ಎಂದು ಆಗ್ರಹಿಸಿವೆ. ಜತೆಗೆ, ಶಾಂತಿಪಾಲಕರು ಯಾವತ್ತೂ ದಾಳಿಯ ಗುರಿಯಾಗಬಾರದು ಎಂದು ಹೇಳಿದೆ. ಭದ್ರತಾ ಮಂಡಳಿಯು ಯುಎನ್‍ಐಎಫ್‍ಐಎಲ್‍ಗೆ ಸಂಪೂರ್ಣ ಬೆಂಬಲ ಪುನರುಚ್ಚರಿಸಿದ್ದು ಪ್ರಾದೇಶಿಕ ಸ್ಥಿರತೆಯನ್ನು ಬೆಂಬಲಿಸುವಲ್ಲಿ ಅದು ನಿರ್ವಹಿಸುತ್ತಿರುವ ಮಹತ್ತರ ಪಾತ್ರವನ್ನು ಗುರುತಿಸಿದೆ. ಲೆಬನಾನ್‍ನಲ್ಲಿರುವ ಶಾಂತಿಪಾಲನಾ ಪಡೆಗೆ ಯೋಧರನ್ನು ಕಳುಹಿಸಿಕೊಟ್ಟಿರುವ ದೇಶಗಳನ್ನು ಶ್ಲಾಘಿಸಿದೆ.

ನಾಗರಿಕರ ಸಾವು-ನೋವು, ಸಂಕಷ್ಟ, ನಾಗರಿಕರ ಮೂಲಸೌಕರ್ಯಗಳ ನಾಶ, ಲೆಬನಾನ್‍ನಲ್ಲಿರುವ ಸಾಂಸ್ಕೃತಿಕ ಪರಂಪರೆಯ ತಾಣಗಳಿಗೆ ಆಗಿರುವ ಹಾನಿ, ಬಾಲ್‍ಬೆಕ್ ಮತ್ತು ಟೈರ್ ನಗರಗಳಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಿಗೆ ಅಪಾಯ ಎದುರಾಗಿರುವ ಬಗ್ಗೆ, ಆಂತರಿಕವಾಗಿ ಸ್ಥಳಾಂತರಗೊಂಡ ಜನರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಮಂಡಳಿ ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿದ್ದು, `ಎಲ್ಲಾ ಪಕ್ಷಗಳೂ' ಅಂತರಾಷ್ಟ್ರೀಯ ಮಾನವೀಯ ಕಾನೂನಿಗೆ ಬದ್ಧವಾಗಿರುವಂತೆ ಮತ್ತು ಭದ್ರತಾ ಮಂಡಳಿಯ ನಿರ್ಣಯಗಳನ್ನು ಸಂಪೂರ್ಣ ಅನುಷ್ಠಾನಗೊಳಿಸುವಂತೆ ಆಗ್ರಹಿಸಿದ್ದಾರೆ.

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳು ಹಿಜ್ಬುಲ್ಲಾಗಳಿಗೆ ರಕ್ಷಣೆ ನೀಡುತ್ತಿವೆ ಎಂದು ಆರೋಪಿಸುತ್ತಿರುವ ಇಸ್ರೇಲ್, ತಮ್ಮ ಸುರಕ್ಷತೆಗಾಗಿ ಯುಎನ್‍ಐಎಫ್‍ಐಎಲ್ ದಕ್ಷಿಣ ಲೆಬನಾನ್‍ನಿಂದ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಆಗ್ರಹಿಸಿದೆ. ಆದರೆ ಇದನ್ನು ತಿರಸ್ಕರಿಸಿರುವ ಶಾಂತಿಪಾಲನಾ ಪಡೆ ಗಡಿಭಾಗದ ಬಳಿ ತನ್ನ ಕರ್ತವ್ಯವನ್ನು ಮುಂದುವರಿಸಿದ್ದು `ಸ್ಪಷ್ಟವಾಗಿ ಗುರುತಿಸಬಹುದಾದ ಯುಎನ್‍ಐಎಫ್‍ಐಎಲ್ ಆಸ್ತಿಗಳ ಮೇಲೆ ಇಸ್ರೇಲ್‍ನ ದಾಳಿ ಮತ್ತು ಉದ್ದೇಶಪೂರ್ವಕ ಹಾನಿ ನಡೆಸುವುದು ಅಂತರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆ ನಿರ್ಣಯಗಳ ಸ್ಪಷ್ಟ ಉಲ್ಲಂಘನೆಯಾಗಿದೆ' ಎಂದು ಹಲವು ಬಾರಿ ಎಚ್ಚರಿಕೆ ನೀಡಿದೆ.

 ಇಸ್ರೇಲ್‍ನಿಂದ ಯುದ್ದಾಪರಾಧ | ಮಾನವ ಹಕ್ಕು ಸಂಸ್ಥೆ ವರದಿ

 ಇಸ್ರೇಲ್ ಅಧಿಕಾರಿಗಳು ಗಾಝಾದಲ್ಲಿ ಫೆಲೆಸ್ತೀನ್ ಜನರ ಬಲವಂತದ ಸ್ಥಳಾಂತರಕ್ಕೆ ಕಾರಣವಾಗಿದ್ದು ಅದು ಯುದ್ಧಾಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ರೂಪಿಸುತ್ತದೆ ಎಂದು ಗುರುವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ಮಾನವ ಹಕ್ಕು ನಿಗಾ ಸಂಸ್ಥೆ ಹೇಳಿದೆ.

ಬಲವಂತದ ಸ್ಥಳಾಂತರ ವ್ಯಾಪಕವಾಗಿದೆ ಮತ್ತು ಅದು ವ್ಯವಸ್ಥಿತವಾಗಿ ಮತ್ತು ಸರಕಾರದ ನೀತಿಯ ಭಾಗವಾಗಿ ನಡೆಯುತ್ತಿರುವುದಕ್ಕೆ ಪುರಾವೆಗಳಿವೆ. ಇಂತಹ ಕೃತ್ಯಗಳು ಮಾನವೀಯತೆಯ ವಿರುದ್ಧದ ಅಪರಾಧವನ್ನೂ ರೂಪಿಸುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಫೆಲೆಸ್ತೀನೀಯರ ಸ್ಥಳಾಂತರವು ಅವರನ್ನು ಶಾಶ್ವತವಾಗಿ ಬಫರ್ ವಲಯ ಮತ್ತು ಭದ್ರತಾ ಕಾರಿಡಾರ್ ಗಳಲ್ಲಿ ಇರಿಸುವ ಯೋಜನೆಯಾಗಿರಬಹುದು. ಇಂತಹ ಕ್ರಮಗಳು `ಜನಾಂಗೀಯ ಶುದ್ಧೀಕರಣ'ಕ್ಕೆ ಸಮವಾಗಿರುತ್ತದೆ' ಎಂದು ವರದಿ ಹೇಳಿದೆ.

ಆದರೆ ಶಾಶ್ವತ ಬಫರ್ ವಲಯಗಳನ್ನು ನಿರ್ಮಿಸಲು ಯೋಜಿಸಲಾಗುತ್ತಿದೆ ಎಂಬ ವರದಿಯನ್ನು ಇಸ್ರೇಲ್ ಮಿಲಿಟರಿ ನಿರಾಕರಿಸಿದ್ದು, ಯುದ್ಧ ಅಂತ್ಯಗೊಂಡ ಬಳಿಕ ಸ್ಥಳಾಂತರಗೊಂಡ ಫೆಲೆಸ್ತೀನೀಯರು ತಮ್ಮ ಮನೆಗೆ ಮರಳಲು ಅವಕಾಶ ನೀಡಲಾಗುವುದು ಎಂದಿದೆ.

ಸಶಸ್ತ್ರ ಸಂಘರ್ಷಕ್ಕೆ ಸಂಬಂಧಿಸಿದ ಕಾನೂನಿನ ಪ್ರಕಾರ ` ನಾಗರಿಕರ ಭದ್ರತೆ ಅಥವಾ ಅನಿವಾರ್ಯ ಮಿಲಿಟರಿ ಕಾರಣಗಳಿಗೆ ಅಗತ್ಯವಿದ್ದರೆ ಮಾತ್ರ ಆಕ್ರಮಿತ ಪ್ರದೇಶದಿಂದ ನಾಗರಿಕರನ್ನು ಬಲವಂತದಿಂದ ಸ್ಥಳಾಂತರಿಸಬಹುದು. ಇಸ್ರೇಲ್‍ನ ದಾಳಿಯಿಂದಾಗಿ ಗಾಝಾ ಪ್ರದೇಶದಲ್ಲಿ ಸುಮಾರು 2.3 ದಶಲಕ್ಷ ಜನರು ಹಲವು ಬಾರಿ ಬಲವಂತದಿಂದ ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News