ಗಾಝಾ ನೆರವು ಹೆಚ್ಚಿಸುವ ನಿರ್ಣಯಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅನುಮೋದನೆ

Update: 2023-12-23 17:22 GMT

ವಿಶ್ವಸಂಸ್ಥೆ ಭದ್ರತಾ ಮಂಡಳಿ | Photo: pti

ಜಿನೆವಾ: ಒಂದು ವಾರದ ವಿಳಂಬ ಮತ್ತು ಅಮೆರಿಕದಿಂದ ವಿಟೊ ಪ್ರಯೋಗದ ಸಾಧ್ಯತೆಯನ್ನು ದೂರವಿಡಲು ನಿರಂತರ ಮಾತುಕತೆಯ ಬಳಿಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗಾಝಾಕ್ಕೆ ಮಾನವೀಯ ನೆರವು ಹೆಚ್ಚಿಸುವ ನಿರ್ಣಯವನ್ನು ಶುಕ್ರವಾರ ಅನುಮೋದಿಸಿದೆ.

ಆದರೆ ಯುಎಇ ಮಂಡಿಸಿದ ನಿರ್ಣಯದಲ್ಲಿ ಇಸ್ರೇಲ್-ಹಮಾಸ್ ನಡುವೆ ತಕ್ಷಣದ ಕದನ ವಿರಾಮಕ್ಕೆ ಸ್ಪಷ್ಟವಾಗಿ ಕರೆ ನೀಡುವುದರಿಂದ ದೂರ ಸರಿಯಲಾಗಿದ್ದು ಅದರ ಬದಲು ‘ಕದನ ವಿರಾಮಕ್ಕೆ ಸೂಕ್ತ ಪರಿಸ್ಥಿತಿಗಳನ್ನು ರಚಿಸುವ ಅಗತ್ಯವನ್ನು’ ಒತ್ತಿಹೇಳಲಾಗಿದೆ. 15 ಸದಸ್ಯರ ಭದ್ರತಾ ಮಂಡಳಿಯಲ್ಲಿ ಅಮೆರಿಕ ಮತ್ತು ರಶ್ಯ ಮತದಾನದಿಂದ ದೂರ ಸರಿದ ಬಳಿಕ ನಿರ್ಣಯವನ್ನು ಅನುಮೋದಿಸಲಾಯಿತು.

ಗಾಝಾದಲ್ಲಿ 2.3 ದಶಲಕ್ಷ ಫೆಲೆಸ್ತೀನೀಯರಿಗೆ ನೆರವು ವಿತರಣೆಯಲ್ಲಿ ಇಸ್ರೇಲ್ನ ನಿಯಂತ್ರಣವೂ ಮುಂದುವರಿಯಲಿದೆ. ಈಜಿಪ್ಟ್ನಿಂದ ರಫಾ ಗಡಿದಾಟು ಮೂಲಕ ಮತ್ತು ಇಸ್ರೇಲ್ ನಿಯಂತ್ರಿತ ಕೆರೆಮ್ ಶಲೋಮ್ ಗಡಿದಾಟು ಮೂಲಕ ಗಾಝಾಕ್ಕೆ ಪೂರೈಕೆಯಾಗುವ ನೆರವು ವಿತರಣೆಯನ್ನು ಇಸ್ರೇಲ್ ಮೇಲ್ವಿಚಾರಣೆ ನಡೆಸಲಿದೆ.

ಆದರೆ ಯುದ್ಧದ ನಿಲುಗಡೆ ಕುರಿತು ಸ್ಪಷ್ಟವಾಗಿ ಉಲ್ಲೇಖಿಸದಿರುವುದು ವೀಟೊ ಅಧಿಕಾರ ಹೊಂದಿರುವ ರಶ್ಯ, ಅರಬ್ ದೇಶಗಳು ಹಾಗೂ ಇಸ್ಲಾಮಿಕ್ ಸಹಕಾರ ದೇಶಗಳ ಸಂಘಟನೆಯ ಸದಸ್ಯರು ಸೇರಿದಂತೆ ಹಲವು ಸಮಿತಿ ಸದಸ್ಯರನ್ನು ನಿರಾಶೆಗೊಳಿಸಿತು. ಹಮಾಸ್ ವಿರುದ್ಧ ಮಾರಣಾಂತಿಕ ದಾಳಿ ಮುಂದುವರಿಸಲು ಇಸ್ರೇಲ್ಗೆ ಅನುಮೋದನೆ ನೀಡಿದಂತಾಗಿದೆ ಎಂದು ಕೆಲವು ಪ್ರತಿನಿಧಿಗಳು ಟೀಕಿಸಿದರು.

ಯುದ್ಧಗಳ ತುರ್ತು ಮತ್ತು ಸಮರ್ಥನೀಯ ನಿಲುಗಡೆಗೆ ಕರೆ ನೀಡುವ ಆರಂಭಿಕ ಪಠ್ಯಕ್ಕೆ ಹಿಂತಿರುಗಲು ಕರಡು ತಿದ್ದುಪಡಿಯನ್ನು ರಶ್ಯ ಪ್ರಸ್ತಾವಿಸಿತು. ಈ ಪ್ರಸ್ತಾವನೆಗೆ 10 ಸದಸ್ಯರು ಬೆಂಬಲ ಸೂಚಿಸಿದರೆ 4 ಸದಸ್ಯರು ಮತದಾನದಿಂದ ದೂರ ಉಳಿದರು. ಅಮೆರಿಕ ವೀಟೊ ಪ್ರಯೋಗಿಸಿ ಪ್ರಸ್ತಾವನೆಯನ್ನು ತಡೆಹಿಡಿಯಿತು. ಅಮೆರಿಕ ಮತ್ತು ಇಸ್ರೇಲ್ ಕದನ ವಿರಾಮವನ್ನು ವಿರೋಧಿಸುತ್ತಿದ್ದು ಇದರಿಂದ ಹಮಾಸ್ಗೆ ಪ್ರಯೋಜನವಾಗಲಿದೆ ಎಂದು ಪ್ರತಿಪಾದಿಸಿವೆ.

ಆರಂಭಿಕ ಕರಡು ಮಸೂದೆಯಲ್ಲಿ ‘ ಗಾಝಾಕ್ಕೆ ಪೂರೈಕೆಯಾಗುವ ನೆರವು ವಿತರಣೆಯನ್ನು ಯುದ್ಧದಲ್ಲಿ ಭಾಗಿಯಾಗದ ಪಕ್ಷ ಮೇಲ್ವಿಚಾರಣೆ ನಡೆಸುವ ವ್ಯವಸ್ಥೆಯನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಸ್ಥಾಪಿಸಬೇಕು’ ಎಂದು ಕರೆ ನೀಡಲಾಗಿತ್ತು. ಆದರೆ ಅಂತಿಮ ನಿರ್ಣಯದಲ್ಲಿ ‘ಸಂಘರ್ಷದಲ್ಲಿ ಪಕ್ಷವಲ್ಲದ ದೇಶಗಳ ಮೂಲಕ ಗಾಝಾಕ್ಕೆ ನೆರವು ಪೂರೈಕೆಯನ್ನು ವೇಗಗೊಳಿಸುವ ವಿಶ್ವಸಂಸ್ಥೆ ಕಾರ್ಯವಿಧಾನವನ್ನು ಸ್ಥಾಪಿಸಲು ಹಿರಿಯ ಮಾನವೀಯ ಮತ್ತು ಪುನರ್ನಿರ್ಮಾಣ ಸಂಯೋಜಕರನ್ನು ನೇಮಿಸಲು’ ಗುಟೆರಸ್ಗೆ ಕರೆ ನೀಡಲಾಗಿದೆ. ಯುದ್ಧ ನಿರತರು ಅಂತರಾಷ್ಟ್ರೀಯ ಮಾನವೀಯ ಕಾನೂನಿಗೆ ಬದ್ಧವಾಗಿರಬೇಕು. ನಾಗರಿಕರು ಮತ್ತು ನಾಗರಿಕ ಸೌಲಭ್ಯಗಳ ಮೇಲಿನ ದಾಳಿ ಖಂಡನೀಯ. ನಾಗರಿಕರ ವಿರುದ್ಧದ ಎಲ್ಲಾ ಹಿಂಸಾಚಾರ, ಹಗೆತನದ ದಾಳಿಯನ್ನು ಖಂಡಿಸುವುದಾಗಿ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ತಿದ್ದುಪಡಿ

ಆರಂಭದ ಕರಡು ನಿರ್ಣಯದಲ್ಲಿ ‘ನೆರವು ವಿತರಣೆಗೆ ಪ್ರವೇಶವನ್ನು ಅನುಮತಿಸಲು ಯುದ್ಧದ ತುರ್ತು ಮತ್ತು ಸಮರ್ಥನೀಯ ನಿಲುಗಡೆಗೆ’ ಕರೆ ನೀಡಲಾಗಿತ್ತು. ಆದರೆ ಅಮೆರಿಕದ ಆಕ್ಷೇಪದ ಬಳಿಕ ಇದರಲ್ಲಿ ತಿದ್ದುಪಡಿ ಮಾಡಿ ಅಂಗೀಕರಿಸಿದ ನಿರ್ಣಯದಲ್ಲಿ ‘ಸುರಕ್ಷಿತ, ಅಡೆತಡೆಯಿಲ್ಲದ ಮತ್ತು ವಿಸ್ತರಿತ ಮಾನವೀಯ ಪ್ರವೇಶವನ್ನು ತಕ್ಷಣವೇ ಅನುಮತಿಸಲು ಹಾಗೂ ಹಗೆತನದ ಸಮರ್ಥನೀಯ ನಿಲುಗಡೆಗೆ ಪರಿಸ್ಥಿತಿಗಳನ್ನು ಸೃಷ್ಟಿಸಲು ತುರ್ತು ಕ್ರಮಗಳಿಗೆ ’ ಕರೆ ನೀಡಿದೆ.

ಇಸ್ರೇಲ್ ಆದೇಶಕ್ಕೆ ವಿಶ್ವಸಂಸ್ಥೆ ಖಂಡನೆ

ವಿಶ್ವಸಂಸ್ಥೆ: ಗಾಝ ಪಟ್ಟಿಯ ನಿವಾಸಿಗಳು ಸ್ಥಳಾಂತರಗೊಳ್ಳಲು ಇಸ್ರೇಲ್ ನೀಡಿರುವ ಸೂಚನೆಯನ್ನು ವಿಶ್ವಸಂಸ್ಥೆ ಖಂಡಿಸಿದೆ. ಗಾಝಾದ ನಿವಾಸಿಗಳು ಚೆಸ್ ಆಟದ ದಾಳಗಳಲ್ಲ. ಅವರನ್ನು ಇಷ್ಟಬಂದಂತೆ ಸ್ಥಳಾಂತರಿಸುವುದು ವೈಮಾನಿಕ ದಾಳಿಯ ಅಪಾಯಕ್ಕೆ ಅವರನ್ನು ದೂಡಿದಂತಾಗುತ್ತದೆ ಎಂದು ವಿಶ್ವಸಂಸ್ಥೆ ಖಂಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News