ರಶ್ಯದ ಮಾಧ್ಯಮದ ಮೇಲೆ ಅಮೆರಿಕದ ಅಸಮ್ಮತ ಒತ್ತಡ : ಪೆಸ್ಕೋವ್ ಆರೋಪ

Update: 2024-09-06 17:12 GMT

ಮಾಸ್ಕೋ : ರಶ್ಯದ ಮಾಧ್ಯಮದ ಮೇಲೆ ಅಮೆರಿಕ ಸ್ವೀಕಾರಾರ್ಹವಲ್ಲದ ಒತ್ತಡ ಹೇರುತ್ತಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಆರೋಪಿಸಿದ್ದಾರೆ.

ರಶ್ಯದ ಟಿವಿಯಲ್ಲಿ ಕಾರ್ಯಕ್ರಮ ಪ್ರಸ್ತುತಪಡಿಸುವ ಡಿಮಿಟ್ರೊ ಸೈಮ್ಸ್ ಹಾಗೂ ಅವರ ಪತ್ನಿ ಅಮೆರಿಕದ ನಿರ್ಬಂಧವನ್ನು ಉಲ್ಲಂಘಿಸಿದ್ದಾರೆ ಎಂದು ಅಮೆರಿಕದ ನ್ಯಾಯ ಇಲಾಖೆ ಪ್ರಕರಣ ದಾಖಲಿಸಿದ ಬಗ್ಗೆ ಪ್ರತಿಕ್ರಿಯಿಸಿದ ಪೆಸ್ಕೋವ್ `ಅಮೆರಿಕವು ರಶ್ಯ, ರಶ್ಯದ ಜನತೆ, ರಶ್ಯದ ಮಾಧ್ಯಮಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದೆ' ಎಂದು ಆರೋಪಿಸಿದ್ದಾರೆ.

2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಲು ರಶ್ಯ ಪ್ರಯತ್ನಿಸುತ್ತಿದೆ ಎಂದು ಅಮೆರಿಕ ಗುರುವಾರ ಆರೋಪಿಸಿತ್ತು. ಜತೆಗೆ, ರಶ್ಯದ ಸರಕಾರಿ ಸ್ವಾಮ್ಯದ ಮಾಧ್ಯಮ ಆರ್ಟಿ ಮತ್ತು ಅದರ ಸಂಪಾದಕರ ವಿರುದ್ಧ ನಿರ್ಬಂಧ ಜಾರಿಗೊಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೆಸ್ಕೋವ್ `ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಲು ರಶ್ಯ ಪ್ರಯತ್ನಿಸುತ್ತಿಲ್ಲ. ಆದರೆ ನಮ್ಮ ದೇಶದೊಳಗೆ ಏನು ನಡೆಯುತ್ತಿದೆ ಎಂಬ ಬಗ್ಗೆ ನಮ್ಮ ಅಭಿಪ್ರಾಯವನ್ನು, ವಾಸ್ತವಿಕ ಮಾಹಿತಿಯನ್ನು ಹೊರಜಗತ್ತಿಗೆ ತಿಳಿಸಲು ಅಮೆರಿಕ ಅಡ್ಡಿಪಡಿಸುತ್ತಿದೆ. ರಶ್ಯದ ವಿರುದ್ಧ ಏಕಪಕ್ಷೀಯ ಮಾಹಿತಿ ಪ್ರಸಾರ ಮಾಡುವುದು ಅವರ ಉದ್ದೇಶವಾಗಿದೆ. ಆದರೆ ನಮ್ಮ ದೃಷ್ಟಿಕೋನದ ಸುದ್ದಿಗಳನ್ನು ಪಡೆಯಲೂ ವೀಕ್ಷಕರಿಗೆ ಆಯ್ಕೆಗಳಿವೆ ಎಂಬುದನ್ನು ಒಪ್ಪಿಕೊಳ್ಳಲು ಅಮೆರಿಕ ತಯಾರಿಲ್ಲ. ಇದು ತೀವ್ರ ಒತ್ತಡದ ಕ್ರಮವಾಗಿದ್ದು ಸ್ವೀಕಾರಾರ್ಹವಲ್ಲ ಮತ್ತು ಇದನ್ನು ಖಂಡಿಸುತ್ತೇವೆ' ಎಂದರು.

ಆರ್ಟಿ ಮಾಧ್ಯಮದ ವಿರುದ್ಧ ಅಮೆರಿಕದ ಕ್ರಮಕ್ಕೆ ಕಠಿಣ ಪ್ರತಿಕ್ರಮ ಕೈಗೊಳ್ಳಲಾಗುವುದು. ವಿವಿಧ ವಿದೇಶಿ ಮಾಧ್ಯಮ ಸಂಸ್ಥೆಗಳ ಸಂಪಾದಕೀಯ ನೀತಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ಮುಂದೆ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವಾಗ ಈ ಅಂಶಗಳನ್ನು ಪರಿಗಣಿಸಲಾಗುವುದು ಎಂದು ಪೆಸ್ಕೋವ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News