ಅಧ್ಯಕ್ಷರ ಹತ್ಯೆಗೆ ಸಂಚು ರೂಪಿಸಿದ ಆರೋಪ: ಮೂವರು ಅಮೆರಿಕನ್ನರನ್ನು ಬಂಧಿಸಿದ ವೆನೆಝುವೆಲಾ ಸರಕಾರ

Update: 2024-09-15 16:00 GMT

ನಿಕೋಲಸ್ ಮಡುರೊ | PC : PTI 

ಕ್ಯಾರಕಾಸ್ : ಅಧ್ಯಕ್ಷ ನಿಕೋಲಸ್ ಮಡುರೊ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಮೂವರು ಅಮೆರಿಕನ್ ಪ್ರಜೆಗಳ ಸಹಿತ ಆರು ಮಂದಿಯನ್ನು ವೆನೆಝುವೆಲಾ ಸರಕಾರ ಬಂಧಿಸಿದೆ.

ಅವರು ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲೂ ಯೋಜನೆ ರೂಪಿಸಿದ್ದರು ಎಂದು ಆರೋಪಿಸಲಾಗಿದೆ. ಹಿಂಸಾತ್ಮಕ ಕೃತ್ಯಗಳ ಮೂಲಕ ಮಡುರೊ ಮತ್ತವರ ಸರಕಾರವನ್ನು ಅಸ್ಥಿರಗೊಳಿಸಲು ಸಂಚು ಹೂಡಿದ್ದ ಆರೋಪದಲ್ಲಿ ಅಮೆರಿಕದ ಮೂವರು, ಸ್ಪೇನ್‍ನ ಇಬ್ಬರು ಮತ್ತು ಝೆಕೊಸ್ಲಾವಾಕಿಯಾದ ಒಬ್ಬ ಪ್ರಜೆಯನ್ನು ಬಂಧಿಸಲಾಗಿದೆ. ಇವರ ಬಳಿಯಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವೆನೆಝುವೆಲಾದ ಆಂತರಿಕ ಸಚಿವ ಡಿಯೊಸಾಡೊ ಕ್ಯಬೆಲ್ಲೋ ಘೋಷಿಸಿದ್ದಾರೆ.

ಅಮೆರಿಕದ ಸಿಐಎ ಹಾಗೂ ಸ್ಪೇನ್‍ನ ಸಿಎನ್‍ಐ ಈ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿತ್ತು. ಆರೋಪಿಗಳು ಅಧ್ಯಕ್ಷ ಮಡುರೊ ಹತ್ಯೆ ನಡೆಸಲು ಬಾಡಿಗೆ ಹಂತಕರನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅಮೆರಿಕ ಸರಕಾರದ ಸಂಪರ್ಕದ ಬಗ್ಗೆ ಸ್ಪಷ್ಟ ಮಾಹಿತಿಯಿದೆ. ಆರೋಪಿಗಳು ಫ್ರಾನ್ಸ್, ಪೂರ್ವ ಯುರೋಪ್‍ನ ಬಾಡಿಗೆ ಹಂತಕರನ್ನು ಸಂಪರ್ಕಿಸಿದ್ದರು. ಆರೋಪಿಗಳ ಅಡಗುದಾಣದಿಂದ ಅಮೆರಿಕ ನಿರ್ಮಿತ 400ಕ್ಕೂ ಅಧಿಕ ರೈಫಲ್‍ಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರು ಭಯೋತ್ಪಾದಕ ಕೃತ್ಯದ ಸಂಚು ನಡೆಸುತ್ತಿದ್ದರು. ಬಂಧಿತರು ಅಮೆರಿಕ, ಸ್ಪೇನ್‍ನ ಗುಪ್ತಚರ ಏಜೆನ್ಸಿ ಹಾಗೂ ವೆನೆಝುವೆಲಾದ ವಿಪಕ್ಷ ನಾಯಕಿ ಮರಿಯಾ ಕೊರಿನಾ ಮಚಾದೊ ಜತೆ ಸಂಪರ್ಕದಲ್ಲಿದ್ದರು ಎಂದು ಸಚಿವರು ಹೇಳಿದ್ದಾರೆ.

ಜುಲೈಯಲ್ಲಿ ವೆನೆಝುವೆಲಾದಲ್ಲಿ ನಡೆದಿದ್ದ ವಿವಾದಾತ್ಮಕ ಅಧ್ಯಕ್ಷೀಯ ಚುನಾವಣೆಯ ಬಳಿಕ ಅಮೆರಿಕ ಹಾಗೂ ವೆನೆಝುವೆಲಾದ ನಡುವೆ ಉದ್ವಿಗ್ನತೆ ಹೆಚ್ಚಿದೆ. ಚುನಾವಣೆಯಲ್ಲಿ ತಾನೇ ಗೆದ್ದಿರುವುದಾಗಿ ಅಧ್ಯಕ್ಷ ನಿಕೋಲಸ್ ಮಡುರೊ ಘೋಷಿಸಿದ್ದರು. ಆದರೆ ಮಡುರೊ ಮತ ಎಣಿಕೆಯಲ್ಲಿ ಹಸ್ತಕ್ಷೇಪ ನಡೆಸಿರುವುದಾಗಿ ವೆನೆಝುವೆಲಾದ ವಿಪಕ್ಷಗಳು, ಅಮೆರಿಕ, ಸ್ಪೇನ್ ಸಹಿತ ಹಲವು ದೇಶಗಳು ಆರೋಪಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News