ಪುವಾ ನ್ಯೂಗಿನಿಯಾ | ಬುಡಕಟ್ಟು ಜನಾಂಗದ ಹಿಂಸಾಚಾರ ; 35 ಮಂದಿ ಮೃತ್ಯು

Update: 2024-09-17 16:51 GMT

PC : APF

ಪೋರ್ಟ್ ಮೊರೆಸ್ಬಿ : ಪಪುವಾ ನ್ಯೂಗಿನಿಯಾದ ಪರ್ವತ ಪ್ರದೇಶದ ಪೊರ್ಗೆರಾ ಕಣಿವೆ ಪ್ರದೇಶದಲ್ಲಿ ಬುಡಕಟ್ಟು ಜನರ ಹಿಂಸಾಚಾರದಲ್ಲಿ 35ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ನ್ಯೂ ಪೊರ್ಗೆರಾ ಚಿನ್ನದ ಗಣಿಯ ಬಳಿಯಲ್ಲಿ ರವಿವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಬಳಿಕ ಎರಡೂ ಗುಂಪುಗಳ ಬೆಂಬಲಿಗರು ಸ್ಥಳಕ್ಕೆ ಆಗಮಿಸಿದಾಗ ಘರ್ಷಣೆ ಭುಗಿಲೆದ್ದಿದ್ದು ಪೊರ್ಗೆರಾ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಹಿಂಸಾಚಾರ ವ್ಯಾಪಿಸಿದೆ. ಹಲವು ಮನೆಗಳು, ಅಂಗಡಿಗಳು, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಬಳಿಕ ಚಿನ್ನದ ಗಣಿಯನ್ನು ಗುರುವಾರದ ವರೆಗೆ ಮುಚ್ಚಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ದಿ ಪೋಸ್ಟ್ ಕೊರಿಯರ್' ದಿನಪತ್ರಿಕೆ ವರದಿ ಮಾಡಿದೆ.

ಸುಮಾರು 50 ಮಂದಿ ಸಾವನ್ನಪ್ಪಿದ್ದು ಗಾಯಗೊಂಡವರ ಬಗ್ಗೆ ಸರಿಯಾದ ಮಾಹಿತಿ ಲಭಿಸಿಲ್ಲ ಎಂದು ದಕ್ಷಿಣ ಪೆಸಿಫಿಕ್ ದ್ವೀಪರಾಷ್ಟ್ರಕ್ಕೆ ವಿಶ್ವಸಂಸ್ಥೆಯ ಮಾನವೀಯ ಸಲಹೆಗಾರ ಮೇಟ್ ಬಗೋಸ್ಸಿ ಹೇಳಿದ್ದಾರೆ. ಶಾಂತಿ ಸ್ಥಾಪಿಸಲು ಸ್ಥಳಕ್ಕೆ 300 ಯೋಧರು ಹಾಗೂ ಪೊಲೀಸರನ್ನು ರವಾನಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪೊರ್ಗೆರಾ ಪ್ರದೇಶದಲ್ಲಿ ಮಾನವೀಯ ನೆರವಿನ ಅಗತ್ಯವನ್ನು ಪರಿಶೀಲಿಸಲು ತಂಡವನ್ನು ಕಳುಹಿಸುವ ಬಗ್ಗೆ ಪಪುವಾ ನ್ಯೂಗಿನಿಯಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರ ಮತ್ತು ವಿಶ್ವಸಂಸ್ಥೆಯ ಸ್ಥಾನೀಯ ಸಂಯೋಜಕ ರಿಚರ್ಡ್ ಹೊವರ್ಡ್ ಪಾಲ್ಗೊಂಡಿದ್ದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News