ಪೋರ್ಚುಗಲ್ | ತೀವ್ರ ಕಾಡ್ಗಿಚ್ಚು ಮೃತರ ಸಂಖ್ಯೆ 7ಕ್ಕೆ ಏರಿಕೆ
ಲಿಸ್ಬನ್ : ಪೋರ್ಚುಗಲ್‍ನ ಉತ್ತರದ ಅವೈರೊ ಪ್ರಾಂತದಲ್ಲಿ ತೀವ್ರಗತಿಯಲ್ಲಿ ಹಬ್ಬುತ್ತಿರುವ ಕಾಡ್ಗಿಚ್ಚನ್ನು ನಿಯಂತ್ರಿಸಲು ಪ್ರಯತ್ನ ಮುಂದುವರಿದಿದ್ದು ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿದ್ದು 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಸರಕಾರದ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಸೋಮವಾರ ಸಂಜೆಯವರೆಗಿನ ಮಾಹಿತಿಯಂತೆ ಅವೈರೊ ಪ್ರಾಂತದಲ್ಲಿ ಸುಮಾರು 24,700 ಎಕರೆ ಭೂಪ್ರದೇಶ ಕಾಡ್ಗಿಚ್ಚಿನಿಂದ ಸುಟ್ಟುಹೋಗಿದೆ. ಮಂಗಳವಾರ ಕಾಡ್ಗಿಚ್ಚು ನಿಯಂತ್ರಿಸುತ್ತಿದ್ದ ಅಗ್ನಿಶಾಮಕ ದಳದ ವಾಹನ ಕಾಡ್ಗಿಚ್ಚಿನ ಜ್ವಾಲೆಯಡಿ ಸಿಕ್ಕಿಬಿದ್ದಾಗ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ. ಅಲ್ಬರ್ಗೇರಿಯಾ ನಗರಪಾಲಿಕೆ ವ್ಯಾಪ್ತಿಯಲ್ಲಿ ಫ್ಯಾಕ್ಟರಿಯೊಂದರ ಕಾರ್ಮಿಕ ಬೆಂಕಿಯ ಜ್ವಾಲೆಗೆ ಸಿಲುಕಿ ಮೃತಪಟ್ಟರೆ ಮತ್ತೊಬ್ಬ ವ್ಯಕ್ತಿ ತೀವ್ರ ಅಸ್ವಸ್ಥಗೊಂಡು ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಇದರೊಂದಿಗೆ ಮೃತರ ಸಂಖ್ಯೆ 7ಕ್ಕೇರಿದೆ ಎಂದು ಆಂತರಿಕ ಸಚಿವಾಲಯ ಹೇಳಿದೆ.
ದೇಶದಾದ್ಯಂತ ಸುಮಾರು 50 ಕಡೆ ಕಾಡ್ಗಿಚ್ಚು ಹರಡುತ್ತಿದ್ದು 1000ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು, 4,500ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸುಮಾರು 20 ವಿಮಾನಗಳು ಕಾಡ್ಗಿಚ್ಚು ನಿಯಂತ್ರಿಸುವ ಕಾರ್ಯಾಚರಣೆ ನಡೆಸುತ್ತಿವೆ. ಉತ್ತರ ಪೋರ್ಚುಗೀಸ್‍ನ ಅವೈರೊ, ವಿಸೆಯು, ವಿಲಾ ರಿಯಲ್, ಬ್ರಾಗಾ ಮತ್ತು ಪೋರ್ಟೋ ಜಿಲ್ಲೆಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ಯುರೋಪಿಯನ್ ಯೂನಿಯನ್‍ನಿಂದ 8 ಹೆಚ್ಚುವರಿ ಅಗ್ನಿಶಾಮಕ ವಿಮಾನಗಳಿಗೆ ಕೋರಿಕೆ ಸಲ್ಲಿಸಲಾಗಿದೆ ಎಂದು ಪೋರ್ಚುಗಲ್ ಪ್ರಧಾನಿ ಲೂಯಿಸ್ ಮೊಂಟೆನೆಗ್ರೊ ಹೇಳಿದ್ದಾರೆ. ಸ್ಪೇನ್, ಫ್ರಾನ್ಸ್, ಇಟಲಿ ಮತ್ತು ಗ್ರೀಸ್ ದೇಶಗಳು ಅಗ್ನಿಶಾಮಕ ವಿಮಾನಗಳನ್ನು ಶೀಘ್ರ ರವಾನಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.