ಅಧ್ಯಕ್ಷರಾಗುವ ಮೊದಲೇ ಯೂರೋಪಿಯನ್ ಒಕ್ಕೂಟಕ್ಕೆ ಬೆದರಿಕೆ ಹಾಕಿದ ಟ್ರಂಪ್!

Update: 2024-12-21 03:24 GMT

PC: x.com/NewsHour

ವಾಷಿಂಗ್ಟನ್ ಡಿಸಿ: ಪ್ರತಿ ದಿನವೂ ಹೊಸ ಬೆದರಿಕೆ ಎಂಬ ಮಂತ್ರ ಪಠಿಸುತ್ತಿರುವ ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಯೂರೋಪಿಯನ್ ಒಕ್ಕೂಟಕ್ಕೆ ಬೆದರಿಕೆ ಹಾಕಿದ್ದಾರೆ. ಅಮೆರಿಕದ ಜತೆಗಿನ ಭಾರಿ ವ್ಯಾಪಾರ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ದೇಶಗಳಿಗೆ ಅಗತ್ಯವಾದ ಬಹುತೇಕ ತೈಲ ಮತ್ತು ಅನಿಲವನ್ನು ಅಮೆರಿಕದಿಂದ ಖರೀದಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಯೂರೋಪಿಯನ್ ಒಕ್ಕೂಟದ ದೇಶಗಳು ಹೀಗೆ ಮಾಡದಿದ್ದರೆ, ಉದ್ದಕ್ಕೂ ಸುಂಕ ವಿಧಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ತಮ್ಮ ಟ್ರುಥ್ ಸೋಶಿಯಲ್ ಪ್ಲಾಟ್ಫಾರಂನಲ್ಲಿ ಈ ಎಚ್ಚರಿಕೆ ನೀಡಿರುವ ಟ್ರಂಪ್, "ಅಮೆರಿಕದ ಜತೆ ಇರುವ ವ್ಯಾಪಾರ ಅಂತರವನ್ನು ಕಿರಿದು ಮಾಡುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ನಮ್ಮಿಂದ ತೈಲ ಮತ್ತು ಅನಿಲವನ್ನು ಖರೀದಿಸುವಂತೆ ನಾನು ಯೂರೋಪಿಯನ್ ಒಕ್ಕೂಟಕ್ಕೆ ಸೂಚನೆ ನೀಡಿದ್ದೇನೆ. ಇಲ್ಲದಿದ್ದರೆ ಉದ್ದಕ್ಕೂ ಸುಂಕ ವಿಧಿಸಬೇಕಾಗುತ್ತದೆ" ಎಂದು ವಿವರಿಸಿದ್ದಾರೆ.

ಹಿಂದಿನ ಅವಧಿಯಲ್ಲಿ ಕೂಡಾ ಟ್ರಂಪ್, "ಅನಾದಿ ಕಾಲದಿಂದಲೂ ಅಮೆರಿಕದ ಬೆನ್ನ ಮೇಲೆ ಯೂರೋಪ್ ಸವಾರಿ ಮಾಡುತ್ತಿದೆ. ನಾವು ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ" ಎಂದು ಹೇಳಿಕೆ ನೀಡಿದ್ದರು. ನತೆಗೆ ನ್ಯಾಟೊಗೆ ನೀಡುತ್ತಿರುವ ಅಮೆರಿಕದ ನೆರವನ್ನು ಸ್ಥಗಿತಗೊಳಿಸುವುದಾಗಿ ಮತ್ತು ಯೂರೋಪ್ ಕೂಡಾ ಇದಕ್ಕೆ ಕೊಡುಗೆ ನೀಡಬೇಕು ಎಚ್ಚರಿಸಿದ್ದರು.

2022ರಿಂದ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, ಯೂರೋಪಿಯನ್ ಒಕ್ಕೂಟದ ಜತೆಗೆ ಅಮೆರಿಕದ ವ್ಯಾಪಾರ ಕೊರತೆ 202.5 ಶತಕೋಟಿ ಡಾಲರ್ಗಳಾಗಿವೆ. ಯೂರೋಪಿಯನ್ ಒಕ್ಕೂಟದಿಂದ ಅಮೆರಿಕ 553.3 ಶತಕೋಟಿ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದ್ದರೆ, 350.8 ಶತಕೋಟಿ ಡಾಲರ್ ಮೌಲ್ಯದ ಸರಕು ರಫ್ತು ಮಾಡಿದೆ.

ಈ ಅಸಮತೋಲನವನ್ನು ನಿವಾರಿಸಬೇಕು ಎನ್ನುವುದು ಟ್ರಂಪ್ ಬಯಕೆ. ಬೆದರಿಕೆ ಹಾಕುವ ಕಾರ್ಯತಂತ್ರದ ಬದಲು ಅಮೆರಿಕ ಮತ್ತೆ ಸರ್ವಶ್ರೇಷ್ಠ ದೇಶವಾಗಲು ನೆರವಾಗಿ ಎಂದು ಮನವೊಲಿಸುವುದು ಅಗತ್ಯ ಎಂದು ವಿಶ್ಲೇಷಿಸಲಾಗುತ್ತಿದೆ. ಸುಂಕ ಎನ್ನುವುದು ಶಬ್ದಕೋಶದಲ್ಲಿ ತಮಗೆ ಅತ್ಯಂತ ಪ್ರಿಯ ಶಬ್ದ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News