ಜರ್ಮನಿ: ಕ್ರಿಸ್‍ಮಸ್ ಮಾರ್ಕೆಟ್‌ನಲ್ಲಿ ಕಾರು ದಾಳಿ; ಇಬ್ಬರು ಮೃತ್ಯು, ಸೌದಿ ವ್ಯಕ್ತಿ ಬಂಧನ

Update: 2024-12-21 07:50 IST
ಜರ್ಮನಿ: ಕ್ರಿಸ್‍ಮಸ್ ಮಾರ್ಕೆಟ್‌ನಲ್ಲಿ ಕಾರು ದಾಳಿ; ಇಬ್ಬರು ಮೃತ್ಯು, ಸೌದಿ ವ್ಯಕ್ತಿ ಬಂಧನ

PC: x.com/Antiwarcom

  • whatsapp icon

ಬರ್ಲಿನ್ : ಜರ್ಮನಿಯ ಮ್ಯಾಗ್ಡೆಬರ್ಗ್ ಎಂಬಲ್ಲಿನ ಜನದಟ್ಟಣೆಯ ಕ್ರಿಸ್‍ಮಸ್ ಮಾರುಕಟ್ಟೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಹರಿಸಿದ ಪರಿಣಾಮ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶಂಕಿತ ದಾಳಿ ನಡೆಸಿದ ಕಾರು ಚಾಲಕ 50 ವರ್ಷ ವಯಸ್ಸಿನ ವೈದ್ಯ ಮೂಲತಃ ಸೌದಿ ಅರೇಬಿಯಾದವನು ಎನ್ನಲಾಗಿದ್ದು, ಜರ್ಮನಿಯ ಕಾಯಂ ನಿವಾಸಿ ಕಾರ್ಡ್ ಪಡೆದಿದ್ದ. ಆತನನ್ನು ಬಂಧಿಸಲಾಗಿದೆ ಎಂದು ಸಿಎನ್‍ಎನ್ ವರದಿ ಮಾಡಿದೆ.

"ಸದ್ಯಕ್ಕೆ ಆತನೊಬ್ಬನೇ ದಾಳಿಕೋರ ಎಂದು ನಂಬಲಾಗಿದ್ದು, ನಮಗೆ ತಿಳಿದಂತೆ ಸದ್ಯದಲ್ಲಿ ನಗರಕ್ಕೆ ಬೇರೆ ಯಾವುದೇ ಅಪಾಯ ಇಲ್ಲ" ಎಂದು ಸ್ಯಾಕ್ಸೋನಿ-ಅನ್ಹಾಲ್ಟ್ ಗವರ್ನರ್ ರೀನರ್ ಹಸ್ಲೋಫ್ ಸ್ಪಷ್ಟಪಡಿಸಿದ್ದಾರೆ. ಈ ಭಯಾನಕ ದುರಂತದಲ್ಲಿ ಹಲವರು ಸಂತ್ರಸ್ತರಾಗಿದ್ದಾರೆ ಎಂದು ಅವರು ಕಂಬನಿ ಮಿಡಿದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಘಟನೆಯ ದೃಶ್ಯಾವಳಿಯಲ್ಲಿ ಕಂಡುಬಂದಂತೆ ಕಪ್ಪು ಕಾರೊಂದು ಜನದಟ್ಟಣೆಯಲ್ಲಿ ರಭಸದಿಂದ ನುಗ್ಗಿದೆ. ಭಯಭೀತರಾದ ಜನತೆ ಅಡ್ಡಾದಿಡ್ಡಿಯಾಗಿ ಓಡಿ, ಮಾರುಕಟ್ಟೆಯ ಮಳಿಗೆಗಳಲ್ಲಿ ಆಸರೆ ಪಡೆದರು. ಅವಶೇಷಗಳು ಮತ್ತು ಗಾಯಾಳುಗಳು ಮಾರುಕಟ್ಟೆಯ ಓಣಿಗಳಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ. ಇಡೀ ಘಟನಾವಳಿಯ ವಿಡಿಯೊವನ್ನು ನಾಗರಿಕರೊಬ್ಬರು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

 ಈ ದಾಳಿಯನ್ನು ಸೌದಿ ಅರೇಬಿಯಾ ಖಂಡಿಸಿದೆ ಎಂದು ದೇಶದ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News