ಅಮೆರಿಕವನ್ನು ತಲುಪಬಲ್ಲ ಕ್ಷಿಪಣಿ ಅಭಿವೃದ್ಧಿ ಪಡಿಸುತ್ತಿರುವ ಪಾಕಿಸ್ತಾನ : ವರದಿ
ವಾಷಿಂಗ್ಟನ್ : ಪರಮಾಣು ಶಸ್ತ್ರಸಜ್ಜಿತ ಪಾಕಿಸ್ತಾನವು ದೀರ್ಘ ಶ್ರೇಣಿಯ, ಅಮೆರಿಕದ ಗುರಿಯನ್ನೂ ತಲುಪುವ ಸಾಮರ್ಥ್ಯ ಹೊಂದಿರುವ ಬ್ಯಾಲಿಸ್ಟಿಕ್ ಕ್ಷಿಪಣಿ ಸಾಮರ್ಥ್ಯಗಳನ್ನು ಅಭಿವೃದ್ಧಿ ಪಡಿಸುತ್ತಿದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದಕ್ಷಿಣ ಏಶ್ಯಾದ ಆಚೆಗಿನ ಗುರಿಯನ್ನು ಹೊಡೆಯುವ ಸಾಮರ್ಥ್ಯದ ಈ ಕ್ಷಿಪಣಿಯು ಅಮೆರಿಕಕ್ಕೆ ಎದುರಾಗಲಿರುವ ಹೊಸ ಬೆದರಿಕೆಯಾಗಿದೆ. ಪಾಕಿಸ್ತಾನವು ದೀರ್ಘಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ವ್ಯವಸ್ಥೆಯಿಂದ ಉಪಕರಣಗಳವರೆಗೆ, ಗಮನಾರ್ಹವಾಗಿ ದೊಡ್ಡ ರಾಕೆಟ್ ಮೋಟಾರ್ ಗಳ ಪರೀಕ್ಷೆಯನ್ನು ಸಕ್ರಿಯಗೊಳಿಸುವ ಅತ್ಯಾಧುನಿಕ ಕ್ಷಿಪಣಿ ತಂತ್ರಜ್ಞಾನವನ್ನು ಪಡೆಯುವ ಪ್ರಯತ್ನವನ್ನು ಮುಂದುವರಿಸಿದೆ ಎಂದು ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಫೈನರ್ಸ್ ಹೇಳಿದ್ದಾರೆ.
`ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್‍ನ್ಯಾಷನಲ್ ಪೀಸ್' ಸಂಸ್ಥೆಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ` ಈ ಪ್ರವೃತ್ತಿ ಮುಂದುವರಿದರೆ ಪಾಕಿಸ್ತಾನವು ಅಮೆರಿಕ ಸೇರಿದಂತೆ ದಕ್ಷಿಣ ಏಶ್ಯಾದ ಆಚೆಗಿನ ಗುರಿಗಳಿಗೆ ಪ್ರಹಾರ ಮಾಡುವ ಸಾಮರ್ಥ್ಯವನ್ನು ಹೊಂದಲಿದೆ. ಅಮೆರಿಕದ ತಾಯ್ನಾಡನ್ನು ತಲುಪಬಹುದಾದ ಕ್ಷಿಪಣಿಗಳನ್ನು ಹೊಂದಿರುವ ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳ ಸಂಖ್ಯೆ ಕಡಿಮೆಯಿದೆ ಮತ್ತು ಇವು ಪ್ರತಿಕೂಲವಾಗಿರುತ್ತದೆ' ಎಂದು ರಶ್ಯ, ಉತ್ತರ ಕೊರಿಯಾ ಮತ್ತು ಚೀನಾವನ್ನು ಉಲ್ಲೇಖಿಸಿ ಹೇಳಿರುವುದಾಗಿ ವರದಿಯಾಗಿದೆ.
ಆದ್ದರಿಂದ ಪ್ರಾಮಾಣಿಕವಾಗಿ ಹೇಳುವುದಾದರೆ, ಪಾಕಿಸ್ತಾನದ ಕೃತ್ಯಗಳು ಅಮೆರಿಕಕ್ಕೆ ಎದುರಾಗಿರುವ ಹೊಸ ಬೆದರಿಕೆ ಎಂದು ಪರಿಗಣಿಸಬೇಕಾಗುತ್ತದೆ ಎಂದವರು ಹೇಳಿದ್ದಾರೆ.
ಈ ಮಧ್ಯೆ, ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮದ ಮೇಲೆ (ಸರಕಾರಿ ಸ್ವಾಮ್ಯದ ರಕ್ಷಣಾ ಏಜೆನ್ಸಿ ಸೇರಿದಂತೆ) ಅಮೆರಿಕ ಬುಧವಾರ ಹೊಸ ಸುತ್ತಿನ ನಿರ್ಬಂಧ ಜಾರಿಗೊಳಿಸಿರುವುದಾಗಿ ವರದಿಯಾಗಿದೆ. ಒಂದೊಮ್ಮೆ ಅತ್ಯಂತ ನಿಕಟವಾಗಿದ್ದ ಅಮೆರಿಕ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು 2021ರಲ್ಲಿ ಅಫ್ಘಾನಿಸ್ತಾನದಿಂದ ಅಮೆರಿಕದ ಸೇನಾ ತುಕಡಿಯನ್ನು ವಾಪಸು ಪಡೆದಂದಿನಿಂದ ಹದಗೆಡುತ್ತಾ ಸಾಗಿದೆ.